ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಓರ್ವ ಯುವಕ, ಯಾರದು ?! | 21 ಅಡಿ ಎತ್ತರದ ಬಿಲ್ಲಿನ ಮೇಲೆ ನಿಂತು ಭವಿಷ್ಯವಾಣಿ ಗೊರವಯ್ಯ !
ಹಾವೇರಿ: ಮಾಲತೇಶ ದೇವರ ಕಾರ್ಣಿಕ ಎಂದರೆ ಅದು ಹೇಳಿದ ಸುದ್ದಿ ಸತ್ಯವಾಗುವ ಖಚಿತ ನುಡಿ. ಅದು ವರ್ಷದ ಪಕ್ಕಾ ಭವಿಷ್ಯವಾಣಿ ಅಂತಲೆ ಜನಜನಿತ. ದಸರಾ ಹಬ್ಬದ ಸಮಯದಲ್ಲಿ ನಡೆಯುವ ಈ ಕಾರ್ಣಿಕವಾಣಿಯ ಆಧಾರದ ಮೇಲೆ ರೈತರ ಮಳೆ, ಬೆಳೆ ನಿರ್ಧರಿಸುತ್ತಾರೆ, ಆಗುಹೋಗುಗಳು ನಡೆಯುತ್ತದೆ ಎನ್ನುವುದು ಪ್ರತಿತಿ ಮತ್ತು ನಂಬಿಕೆ. ಈ ಬಾರಿ ಹಾವೇರಿಯ ಮಾಲತೇಶ ದೇವರ ಕಾರ್ಣಿಕ ವಾಣಿಯಲ್ಲಿ ರಾಜಕೀಯದ ವಿಷಯ ಕಾಣಿಸಿಕೊಂಡಿದೆ. 21 ಅಡಿ ಎತ್ತರದ ಬಿಲ್ಲಿನ ಮೇಲೆ ನಿಂತು ಗೊರವಯ್ಯ ದನಿ ಏರಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಯುವಕನೊಬ್ಬ ಮುಖ್ಯಮಂತ್ರಿಯಾಗಲಿದ್ದಾನೆ ಎಂದು ಮಾಲತೇಶ್ ದೇವರು ಭವಿಷ್ಯ ನುಡಿದಿದ್ದಾರೆ. ಗೊರವಯ್ಯನ ಭವಿಷ್ಯ ಕೇಳಿದಲ್ಲಿಂದ ಯಾರಾಗಿರಬಹುದು ಆ ಯುವಕ ಕರ್ನಾಟಕ ರಾಜ್ಯವನ್ನು ಮುನ್ನಡೆಸುವವನು ಎಂಬ ಊಹೆ ಲೆಕ್ಕಾಚಾರ ನಡೆದಿದೆ.
ಅಲ್ಲಿನ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಭವಿಷ್ಯ ನುಡಿ ಹೇಳುವ ಸಂದರ್ಭ ಈ ಬಾರಿ ಸಣ್ಣಪುಟ್ಟ ರೈತರಿಗೆ ಲಾಭ ಆಗಲಿದೆ. ರಾಜಕೀಯವಾಗಿ ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಯುವಕನಿಗೆ ರಾಜ್ಯದ ಮುಖ್ಯಮಂತ್ರಿಸ್ಥಾನ ದೊರೆಯಲಿದೆ ಎಂದು ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ. ನವ ರಾತ್ರಿ -9 ದಿನಗಳ ಕಾಲ ಕಠಿಣ ಉಪವಾಸ ವೃತ ಮಾಡಿದ ಗೊರವಪ್ಪ ನಾಗಪ್ಪ ಉರ್ಮಿ ಕಾರ್ಣಿಕ ನುಡಿಯುತ್ತಾರೆ.
ದೇವರಗುಡ್ಡದ ಮಾಲತೇಶ ದೇವಸ್ಥಾನ ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿದೆ. ದಸರಾ ಹಬ್ಬದ ಸಮಯದಲ್ಲಿ ದೇವರಗುಡ್ಡದ ಕರಿಯಾಲ ಪ್ರದೇಶದಲ್ಲಿ ನಡೆಯೋ ಮಾಲತೇಶ ದೇವರ ಕಾರ್ಣಿಕ ಕೇಳಲು ಜನರ ದಂಡೆ ಬಂದಿತ್ತು.
ಕೈಯಲ್ಲಿ ಡಮರುಗ, ಚಾಟಿ ಏಟಿನ ಸದ್ದಿನ ಮೂಲಕ ಗೊರವಪ್ಪಗಳು ಕಾರ್ಣಿಕದ ಗೊರವಪ್ಪನನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬಂದರು. ಸರಿಯಾಗಿ 6 ಗಂಟೆ ಆಗುತ್ತಿದ್ದಂತೆ ಕಾರ್ಣಿಕ ಸ್ಥಳಕ್ಕೆ ಬರುವ ಗೊರವಯ್ಯ 21 ಅಡಿ ಎತ್ತರದ ಬಿಲ್ಲನ್ನೇರಿ ‘ಸದ್ದಲೆ ‘ಎನ್ನುತ್ತಲೆ ಕಿಕ್ಕಿರಿದು ಸೇರಿದ ಜನರ ನಡುವೆ ಕಾರ್ಣಿಕ ನುಡಿಯುತ್ತಾರೆ. ವರ್ಷದ ಭವಿಷ್ಯವಾಣಿ ನುಡಿದ ಬಳಿಕ ಬಿಲ್ಲಿನಿಂದ ಕೆಳಕ್ಕೆ ಬೀಳುತ್ತಾರೆ.
ಈ ವರ್ಷ ಬಿಲ್ಲನ್ನೇರಿದ ಗೊರವಪ್ಪ ನಾಗಪ್ಪ ಉರ್ಮಿ “ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್” ಎಂದು ಕಾರ್ಣಿಕ ನುಡಿದಿದ್ದಾರೆ. ಬಳಿಕ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಕಾರ್ಣಿಕ ವಾಣಿಯ ವಿಶ್ಲೇಷಣೆ ಮಾಡಿದ್ದಾರೆ. ಸಣ್ಣಸಣ್ಣ ರೈತರಿಗೂ ಈ ವರ್ಷ ಉತ್ತಮ ಆಗಲಿದೆ. ರಾಜಕೀಯವಾಗಿ ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ ಎಂದು ಅವರು ವಿಶ್ಲೇಷಿಸಿದ್ದಾರೆ. ಈ ವರ್ಷದ ಕಾರ್ಣಿಕವಾಣಿ ಆಲಿಸಿದ, ಹೆಚ್ಹಾಗಿ ರೈತಾಪಿ ವರ್ಗದ ಜನರೇ ಇರುವ ಅಲ್ಲಿ, ” ಸಣ್ಣ ಸಣ್ಣ ರೈತರಿಗೆ ಉತ್ತಮವಾಗಲಿದೆ” ಎನ್ನುವ ಸಂದೇಶ ಮೂಡಿ ಬಂದುದನ್ನು ಕೇಳಿದ ಜನ ಖುಷಿಯಿಂದ ತಮ್ಮ ತಮ್ಮ ಊರುಗಳತ್ತ ಹೆಜ್ಜೆ ಹಾಕಿದ್ದಾರೆ.