ಇದು ವಿಶ್ವದ ಅತ್ಯಂತ ದುಬಾರಿ ವಿಸ್ಕಿ | ಅಪರೂಪದ Yamazaki ವಿಸ್ಕಿಯ ಒಂದು ಪೆಗ್ಗಿನ ಬೆಲೆ ಬರೋಬ್ಬರಿ 4.7 ಕೋಟಿ ರೂಪಾಯಿ !!!
ಜಪಾನೀಸ್ ವಿಸ್ಕಿಯು ವಿಸ್ಕಿ ಅಭಿಮಾನಿಗಳ ಬಾಯಲ್ಲಿ ನೀರೂರಿಸುವ, ಹೃದಯದಲ್ಲಿ ಕಲರವ ಎಬ್ಬಿಸಬಲ್ಲ ಸ್ಥಾನವನ್ನು ಹೊಂದಿದ ಭಾರೀ ಅಪರೂಪದ, ದುಡ್ಡು ಕೊಟ್ಟರೂ ಸುಲಭವಾಗಿ ಸಿಗದ ವಿಸ್ಕಿ. ಅಪರೂಪದ ಈ 55 ವರ್ಷ ವಯಸ್ಸಿನ ಯಮಜಾಕಿ ವಿಸ್ಕಿಯು, ದ್ರವ ಲೋಕದ ಸಕಲ ಸದ್ಗುಣಗಳನ್ನು ಹೊಂದಿದೆ.
‘ಸರಿ, ಬಣ್ರೋ, ಒಂದು ಪೆಗ್ ಹಾಕ್ಕೊಂಡು ಬರೋಣಾ ‘ ಅಂತ ಗೆಳೆಯರ ದಂಡು ಕಟ್ಟಿಕೊಂಡು ವಿಸ್ಕಿ ಶಾಪಿಗೆ ದಾಂಗುಡಿ ಇಡುವ ಮೊದಲು ಜೇಬು, ಸಾರಿ, ಜೇಬಲ್ಲ ತಿಜೋರಿ ಚೆಕ್ ಮಾಡ್ಕೊಳ್ಳಿ, ಕೋಟಿಗಟ್ಟಲೆ ದುಡ್ಡು ಇದ್ಯಾ ಅಂತ!!
ಹೌದು, ಇದು ಅಂತಿಂತಹ ವಿಸ್ಕಿಯಲ್ಲ ಇದರ ಒಂದು ಪೆಗ್ ಡ್ರಿಂಕ್ ಮಾಡಲು ಬರೋಬ್ಬರಿ 4.7 ಕೋಟಿ ದುಡ್ಡು ಬಾರ್ ಕೌಂಟರಿನ ಮುಂದೆ ಮಡಗಬೇಕು. ಅದರ ಬೆಲೆ ಕೇಳಿದರೆ, ನಿಮ್ಮ ಎಣ್ಣೆ ಕುಡಿಯುವ ಉತ್ಸಾಹ ಮತ್ತು ಈಗಾಗಲೇ ಕುಡಿದು ಟೈಟ್ ಆಗಿದ್ದರೆ ಆ ನಶೆ ನಿರ್ನಾಮ ಆಗುವುದಂತೂ ಸತ್ಯ
ಈ ಜಪಾನೀಸ್ ವಿಸ್ಕಿಯ ತಾಯ್ನಾಡಿನಿಂದ ಹೆಚ್ಚು ಸೀಮಿತ ಆವೃತ್ತಿಯಲ್ಲಿ ಬಿಡುಗಡೆ ಆಗುತ್ತಿದೆ. ಯಮಝಾಕಿ 55, ಎನ್ನುವುದು ನಿಜಕ್ಕೂ ಒಂದು ಸತ್ಕಾರವಾಗಿದೆ. ಈ ವಿಶೇಷವಾದ ವಿಸ್ಕಿಯನ್ನು ಜಪಾನ್‌ನ ಅತ್ಯಂತ ಹಳೆಯ ಮಾಲ್ಟ್ ವಿಸ್ಕಿ ಡಿಸ್ಟಿಲರಿ, ಸುಂಟೋರಿಯ ಯಮಜಾಕಿ ಡಿಸ್ಟಿಲರಿಯಿಂದ ಭಟ್ಟಿ ಇಳಿಸಲಾಗುತ್ತದೆ. 750 ಮಿಲಿ ಬಾಟಲ್ ಸೋಥೆಬಿಯ ಹರಾಜಿನಲ್ಲಿ ಊಹಿಸಲಸದಲ $8,00,000 (ಅಂದಾಜು ರೂ 65.2 ಕೋಟಿ) ಗೆ ಮಾರಾಟವಾಗಿದೆ. ಅಂದರೆ ಒಂದು ಪೆಗ್ಗಿಗೆ 4.7 ಕೋಟಿ ರೂಪಾಯಿಗಳು !
ಈ ಹೊಸ ದಾಖಲೆಯನ್ನು ಸ್ಥಾಪಿಸುವ ಮೂಲಕ, ಈ ಜಪಾನೀಸ್ ವಿಸ್ಕಿ 50 ವರ್ಷ ವಯಸ್ಸಿನ ಯಮಝಾಕಿ ಮತ್ತು 52 ವರ್ಷದ ಕರುಝಾವಾವನ್ನು ಅತ್ಯಂತ ದುಬಾರಿ ಜಪಾನೀಸ್ ವಿಸ್ಕಿ ಬ್ರಾಂಡ್ ಎಂಬ ಹೆಸರುಗಳನ್ನು ಪಡೆದುಕೊಂಡಿವೆ. ಆದರೆ Yamazaki 55 ಈ ಮಟ್ಟಿಗೆ ದುಬಾರಿಯಾಗಲು ಕಾರಣವೇನು? ಇದು ಏಕೆ ಇಷ್ಟು ದುಬಾರಿಯಾಗಿದೆ ಎಂದು ಇಲ್ಲಿ ನಾವೀವಾಗ ತಿಳಿದುಕೊಳ್ಳಲಿದ್ದೇವೆ.
55 ವರ್ಷದ ಯಮಜಾಕಿ ವಿಸ್ಕಿ ಏಕೆ ದುಬಾರಿಯಾಗಿದೆ?
1960 ರಲ್ಲಿ ಮೊದಲ ಬಾರಿಗೆ ಬಟ್ಟಿ ಇಳಿಸಿದ, 55 ವರ್ಷ ವಯಸ್ಸಿನ ಯಮಜಾಕಿಯು ಅಮೂಲ್ಯವಾದ ಸಿಂಗಲ್ ಮಾಲ್ಟ್‌ಗಳ ಮಿಶ್ರಣವಾಗಿದೆ. ಇದನ್ನು ಮೊದಲಿಗೆ ಸಂಟೋರಿಯ ಸಂಸ್ಥಾಪಕ ಶಿಂಜಿರೋ ಟೋರಿಯ ಮೇಲ್ವಿಚಾರಣೆಯಲ್ಲಿ ಬಟ್ಟಿ ಇಳಿಸಲಾಯಿತು. ಮತ್ತು ನಂತರ ಮಿಜುನಾರಾ ಮರದ ಪೀಪಾಯಿಗಳಲ್ಲಿ ಅದು ವಯಸ್ಸಾಗಲು (ಏಜಿಂಗ್) ಮಾಡಲು ಇಡಲಾಯಿತು.
ದ್ರವ ತಜ್ಞರಾದ, ಸನ್ಟೋರಿಯದ ಐದನೇ ತಲೆಮಾರಿನ ಮುಖ್ಯ ಬ್ಲೆಂಡರ್ ಶಿಂಜಿ ಫುಕುಯೊ ಮತ್ತು ಮೂರನೇ ತಲೆಮಾರಿನ ಮಾಸ್ಟರ್ ಬ್ಲೆಂಡರ್ ಶಿಂಗೋ ಟೋರಿ ಸರಿಯಾದ ರಸವಿದ್ಯೆಯನ್ನು ಕಂಡುಹಿಡಿಯಲು ಒಟ್ಟಿಗೆ ಕೆಲಸ ಮಾಡಿದರು. ಅವರು ಅದನ್ನು ಸರಿಯಾಗಿ ಮಿಶ್ರಣ ಮಾಡಿ, ಅದನ್ನು ಕಳೆದ 55 ವರ್ಷಗಳಿಗೂ ಹೆಚ್ಚು ಕಾಲ ಮರದ ಪೀಪಾಯಿಗಳಲ್ಲಿ ಇಟ್ಟು ಅದು ಪಕ್ವವಾದ ನಂತರ ( 55 ವರ್ಶದ ನಂತರ ) ಈ ಸೀಮಿತ ಆವೃತ್ತಿಯ ಜಪಾನೀಸ್ ವಿಸ್ಕಿಗೆ ಸವಿಯಲು ಸಿದ್ಧಗೊಂಡಿದೆ.
ಯಮಜಾಕಿ ವಿಸ್ಕಿಯು ಮಿಜುನಾರಾ ಪೀಪಾಯಿಗಳಿಂದ ವಿಶಿಷ್ಟವಾದ ಆಳವಾದ ಅಂಬರ್ ವರ್ಣವನ್ನು ಹೊಂದಿದೆ. ಇದು ಶ್ರೀಗಂಧದ ಮರದ ದೃಢವಾದ ಪರಿಮಳವನ್ನು ಹೊಂದಿದ್ದು, ಚೆನ್ನಾಗಿ ಮಾಗಿದ ಹಣ್ಣಿನಂತಹ ಸಿಹಿಯಾದ, ಪ್ರಬುದ್ಧವಾದ ಹೀಗೆ ಭರಿತ ಸುವಾಸನೆ ಅದರದು.
ಅದು ಸುವಾಸನೆಯೊಂದಿಗೆ ಬಾಯಿಯಲ್ಲಿ ಅರಳಿ ಸಿಹಿ ಮತ್ತು ಸ್ವಲ್ಪ ಕಹಿ ಮಿಶ್ರಣಕ್ಕೆ ತಿರುಗುತ್ತದೆ. ಗಂಟಲಿನ ಮೂಲಕ ಒಳಕ್ಕೆ ಇಳಿಸುವ ಮೊದಲೇ ಸುಖ ಪ್ರಾಪ್ತಿ ಮಾಡುವ ಗುಣ ಅದಕ್ಕಿದೆ.
55 ವರ್ಷ ವಯಸ್ಸಿನ ಯಮಜಾಕಿ ವಿಸ್ಕಿಯನ್ನು ತನ್ನದೇ ಆದ ಕಸ್ಟಮ್ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಲಾಗಿದ್ದು, ಅದನ್ನೂ ಜಪಾನೀಸ್ ಮಿಜುನಾರಾ ಮರದಿಂದ ಮಾಡಲ್ಪಟ್ಟಿದೆ, ಅದರ ಈ ಕಸ್ಟಮ್ ಬಾಕ್ಸ್ ಅನ್ನು ಲ್ಯಾಕ್ಕರ್‌ನಿಂದ ಮಿರುಗುವಂತೆ ಪೈಂಟ್ ಮಾಡಿ, ಜಪಾನೀ ತಂತ್ರದಂತೆ ಪ್ಯಾಕ್ ಮಾಡಿ ಮಾರಾಟಕ್ಕೆ ಬಿಡಲಾಗುತ್ತದೆ. ಹಾಗಾಗಿಯೇ ಆ ಮಟ್ಟಿಗಿನ ದುಬಾರಿ ಬೆಲೆ.