ದಲಿತ ಮುಖಂಡ ಜಿಗ್ನೇಶ್ ಮೇವಾನಿಗೆ ಜೈಲು ಶಿಕ್ಷೆ
ದಲಿತ ನಾಯಕ ಜಿಗ್ನೇಶ್ ಮೇವಾನಿ ಹಾಗೂ 18 ಮಂದಿಗೆ ಗುಜರಾತ್ನ ಅಹಮದಾಬಾದ್ನಲ್ಲಿನ ಸ್ಥಳೀಯ ನ್ಯಾಯಾಲಯವೊಂದು ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. 2016ರಲ್ಲಿ ಗುಜರಾತ್ ವಿಶ್ವವಿದ್ಯಾಲಯ ಸಮೀಪ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಜಿಗ್ನೇಶ್ ಮೇವಾನಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದರಲ್ಲಿ ಮೇವಾನಿ ಮತ್ತು ಇತರೆ 18 ಮಂದಿ ತಪ್ಪಿತಸ್ಥರು ಎಂದು ಕೋರ್ಟ್ ನಿರ್ಣಯಿಸಿದ್ದು, ತಲಾ ಆರು ತಿಂಗಳು ಜೈಲು ಶಿಕ್ಷೆ ಮತ್ತು 700 ರೂ ದಂಡ ವಿಧಿಸಿದೆ.
ಗುಜರಾತ್ನ ಪಕ್ಷೇತರ ಶಾಸಕರಾಗಿರುವ ಜಿಗ್ನೇಶ್ ಮೇವಾನಿ ಅವರು ತಮ್ಮ ಕೆಲವು ಬೆಂಬಲಿಗರ ಜತೆಗೂಡಿ, ಗುಜರಾತ್ ವಿಶ್ವವಿದ್ಯಾಲಯದ ಲಾ ಭವನ್ ಕಟ್ಟಡಕ್ಕೆ ಡಾ ಬಿಆರ್ ಅಂಬೇಡ್ಕರ್ ಹೆಸರು ಇಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.
ಇದಕ್ಕೂ ಮುನ್ನ ಮೇ ತಿಂಗಳಿನಲ್ಲಿ, ಗುಜರಾತ್ನ ಮೆಕ್ಸನಾದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮೇವಾನಿ ಮತ್ತು ಇತರೆ ಒಂಬತ್ತು ಮಂದಿಯನ್ನು, ಅನುಮತಿ ಇಲ್ಲದೆ ‘ಆಜಾದಿ ಮೆರವಣಿಗೆ’ ನಡೆಸಿದ ಒಂಬತ್ತು ವರ್ಷ ಹಳೆ ಪ್ರಕರಣದಲ್ಲಿ ಮೂರು ತಿಂಗಳು ಜೈಲು ಶಿಕ್ಷೆಗೆ ಒಳಪಡಿಸಿತ್ತು.