ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರದಿಂದ ಗುಡ್ ನ್ಯೂಸ್!

ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆಯರಿಗೆ ನೆಮ್ಮದಿಯ ಸುದ್ದಿಯೊಂದು ದೊರೆತಿದ್ದು, ಅಂಗನವಾಡಿಗಳಲ್ಲಿ ‘ಹೊಸ ಶಿಕ್ಷಣ ನೀತಿ’ (NEP) ಜಾರಿಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಆದರೆ, ಈಗಾಗಲೇ ಕರ್ತವ್ಯದಲ್ಲಿರುವವರನ್ನು ತೆಗೆದುಹಾಕುವುದಿಲ್ಲವೆಂದು ತಿಳಿಸಿದ್ದಾರೆ.

 

ಕಡಿಮೆ ವಿದ್ಯಾರ್ಹತೆ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರು ಕೆಲಸ ಕಳೆದುಕೊಳ್ಳುವ ಭೀತಿ ಹೊಂದಿದ್ದರು. ಆದರೆ ಇದೀಗ ಸರ್ಕಾರ ರಾಜ್ಯದ 20,000 ಅಂಗನವಾಡಿಗಳಲ್ಲಿ ‘ಹೊಸ ಶಿಕ್ಷಣ ನೀತಿ’ (NEP) ಜಾರಿಗೊಳಿಸಲಿದ್ದು, ಈ ಪಠ್ಯಕ್ರಮ ನವೆಂಬರ್ ವೇಳೆಗೆ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

ವಿಧಾನ ಪರಿಷತ್ ನಲ್ಲಿ ಸದಸ್ಯ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ ಹಾಲಪ್ಪ ಆಚಾರ್, ಈಗಾಗಲೇ ಅಂಗನವಾಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತೆಯರನ್ನು ಕೆಲಸದಿಂದ ಕೈ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ಪಠ್ಯವನ್ನು ಪಿಯುಸಿ ಗಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಸುಮಾರು 20 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಮೊದಲ ಹಂತದಲ್ಲಿ ಆರಂಭಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕಡಿಮೆ ವಿದ್ಯಾರ್ಹತೆ ಹೊಂದಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡುವ ಮೂಲಕ ಆ ಕೇಂದ್ರಗಳಲ್ಲೂ ಹೊಸ ಪಠ್ಯಕ್ರಮ ಅಳವಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ರಾಜ್ಯದ ಅಂಗನವಾಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತೆಯರ ಪೈಕಿ 732 ಮಂದಿ ಸ್ನಾತಕೋತ್ತರ ಪದವೀಧರರಾಗಿದ್ದು, 6,017 ಮಂದಿ ಪದವೀಧರರು, 14,303 ಮಂದಿ ಪಿಯುಸಿ ಹಾಗೂ 40,786 ಮಂದಿ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.