ಭಾರತದ ಅತಿ ದೊಡ್ಡ ಕಾರು ಕಳ್ಳನ ಬಂಧನ | 27 ವರ್ಷಗಳಿಂದ ಕಳ್ಳತನದಲ್ಲಿ ತೊಡಗಿದ್ದ ಮೂರು ಹೆಂಡತಿಯರ ಗಂಡ ವಶವಾದ್ದು ಹೇಗೆ?

Share the Article

ನವದೆಹಲಿ: ‘ಭಾರತದ ಅತಿ ದೊಡ್ಡ ಕಾರು ಕಳ್ಳ’ ಎಂದು ಗುರುತಿಸಲಾದ ಆರೋಪಿಯನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಅನಿಲ ಚೌಹಾಣ್ ಎಂಬಾತ ಬಂಧಿತ. ಈತ ದೇಶದ ಆಟೊಮೊಬೈಲ್ ಕಳ್ಳತನ ಜಾಲದ ಕಿಂಗ್ ಪಿನ್ ಎಂದು ಪೊಲೀಸರು ತಿಳಿಸಿದ್ದಾರೆ. ಖಚಿತ ಸುಳಿವು ದೊರೆತ ಕೇಂದ್ರೀಯ ದೆಹಲಿ ಪೊಲೀಸರ ವಿಶೇಷ ಸಿಬ್ಬಂದಿ, ದೇಶಬಂಧು ಗುಪ್ತಾ ರಸ್ತೆ ಪ್ರದೇಶದಲ್ಲಿ ಅನಿಲ್​ನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಈತನ ಬಳಿಯಿಂದ ಅಕ್ರಮ ಬಂದೂಕುಗಳು ಹಾಗೂ ಮದ್ದುಗುಂಡುಗಳನ್ನು ಸಹ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ಫೇಂಡಾಮೃಗಗಳ ಕೊಂಬುಗಳ ಕಳ್ಳಸಾಗಣೆ, ಕೊಲೆ ಸೇರಿದಂತೆ ಸುಮಾರು 180 ಕ್ರಿಮಿನಲ್ ಪ್ರಕರಣಗಳಲ್ಲಿ ಈತನ ಹೆಸರಿದೆ. ಅನಿಲ್ ಪ್ರಸ್ತುತ ಶಸ್ತ್ರಾಸ್ತ್ರ ಕಳ್ಳಸಾಗಾಟದಲ್ಲೂ ತೊಡಗಿಸಿಕೊಂಡಿದ್ದ. ಆತ ಉತ್ತರ ಪ್ರದೇಶದಿಂದ ಶಸ್ತ್ರಾಸ್ತ್ರಗಳನ್ನು ಪಡೆದು ಈಶಾನ್ಯ ಭಾರತದ ನಿಷೇಧಿತ ಬಂಡುಕೋರ ಸಂಘಟನೆಗಳಿಗೆ ಪೂರೈಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

52 ವರ್ಷದ ಆರೋಪಿ, 27 ವರ್ಷಗಳಿಂದ ಕಳ್ಳತನದಲ್ಲಿ ತೊಡಗಿದ್ದಾನೆ. 1998ರಲ್ಲಿ ತನ್ನ ಕಳುವಿನ ಕೈಚಳಕ ಆರಂಭಿಸಿದ ಈತ ದೇಶಾದ್ಯಂತ 5 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಕಳುವು ಮಾಡಿದ್ದಾನೆ ಎನ್ನಲಾಗಿದೆ. ದೆಹಲಿಯ ಖಾನ್​ಪುರ ಪ್ರದೇಶದಲ್ಲಿ ವಾಸಿಸಿದ್ದ ಅನಿಲ್, ಆಟೋ ಚಾಲನೆ ಮಾಡುತ್ತಿದ್ದ. 1995ರ ನಂತರ ಕಾರು ಕಳವು ಆರಂಭಿಸಿದ್ದ. ಆ ಅವಧಿಯಲ್ಲಿ ಅತಿ ಹೆಚ್ಚು ಮಾರುತಿ ಕಾರುಗಳನ್ನು ಆತ ಕದ್ದಿದ್ದ. ಕದ್ದ ಕಾರುಗಳನ್ನು ನೇಪಾಳ, ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಿಗೆ ಕಳಿಸುತ್ತಿದ್ದ. ಕಳವಿನ ಸಂದರ್ಭ ಆತ ಹಲವು ಕಾರು ಚಾಲಕರನ್ನು ಕೊಂದ ಪ್ರಕರಣಗಳೂ ಬೆಳಕಿಗೆ ಬಂದಿದೆ.

ಈತ ಮೂರು ಹೆಂಡತಿಯರನ್ನು ಹೊಂದಿದ್ದು, ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ, ಮುಂಬೈ ಮತ್ತು ಈಶಾನ್ಯ ಭಾರತದ ಹಲವೆಡೆ ಆತ ಅಪಾರ ಆಸ್ತಿಪಾಸ್ತಿ ಹೊಂದಿದ್ದಾನೆ.

Leave A Reply