ಟಿಕೆಟ್ ಇಲ್ಲದೇ ಬಸ್ ಏರಿದ ‘ ನಾಗರಹಾವು’: ಪ್ರಯಾಣಿಕರ ಪಾಡು, ದೇವರಿಗೇ ಪ್ರೀತಿ
ಹಾವೊಂದು ಬಸ್ ಏರಿ ಕುಳಿತಿದೆ. ಹಾವು ಬಸ್ ನಲ್ಲಿ ಕಂಡ ಪರಿಣಾಮ, ಪ್ರಯಾಣಿಕರೆಲ್ಲ ಭಯಭೀತರಾಗಿ ನಿಜಕ್ಕೂ ಪ್ರಯಾಣಿಕರು ಎದ್ದೇನೋ ಬಿದ್ದೆನೋ ಎಂದು ಬಸ್ಸಿನಿಂದ ಇಳಿದು ಓಡಿ ಪ್ರಾಣ ಉಳಿಸಿಕೊಂಡ ಘಟನೆ ಘಟನೆ ನಡೆದಿದೆ.
ಈ ಘಟನೆಯು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಹೌದು, ನಗರದಲ್ಲಿ ಗ್ರಾಮಾಂತರ ಸಾರಿಗೆ ಬಸ್‌ನಲ್ಲಿ ನಾಗರ ಹಾವೊಂದು ಪ್ರತ್ಯಕ್ಷವಾಗಿದ್ದು, ಪ್ರಯಾಣಿಕರೆಲ್ಲರೂ ಆತಂಕದಿಂದ ಬಸ್‌ನಿಂದ ಕೆಳಗಿಳಿದ ಘಟನೆ ಶನಿವಾರ ನಡೆದಿದೆ. ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟ ಕಡೆಗೆ ತೆರಳುತ್ತಿದ್ದ ಗ್ರಾಮಾಂತರ ಸಾರಿಗೆ ಬಸ್‌ನಲ್ಲಿ ಹಾವು ಕಾಣಿಸಿಕೊಂಡ ತತ್ ಕ್ಷಣ ಬಸ್ ನಿಲ್ಲಿಸಿದ್ದಾರೆ. ಪ್ರಯಾಣಿಕರು ಜಾಗ ಖಾಲಿಮಾಡಿದ್ದಾರೆ. ಬಸ್ಸಿನಿಂದ ಇಳಿದ ಚಾಲಕ, ನಿರ್ವಾಹಕ ಹಾಗೂ ಕೆಲ ಪ್ರಯಾಣಿಕರು ಅಡಗಿ ಕುಳಿತ ಹಾವಿಗಾಗಿ ಹುಡುಕಾಟ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ಡಿಪೋ ವ್ಯವಸ್ಥಾಪಕರು ಹಾವು ಹಿಡಿಯುವ ಪರಿಣಿತರನ್ನು ಕರೆಸಿ ಬಸ್ಸಿನ ಒಳಗಡೆ ಹಾವಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಹಾವು ಅಷ್ಟರಲ್ಲಾಗಲೇ ಗುಪ್ತ ಜಾಗ ಸೇರಿಕೊಂಡಿತ್ತು. ಕೊನೆಗೆ, ಅದು ಹೆಡ್‌ಲೈಟ್ ಒಳಗೆ ಅವಿತುಕೊಂಡದ್ದು ಗಮನಕ್ಕೆ ಬಂದಿದೆ. ಅಲ್ಲಿಂದ ಹಾವನ್ನು ಹಿಡಿದು ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹಾವು ಹಿಡಿದ ಬಳಿಕ ಬಸ್ ಶಿಡ್ಲಘಟ್ಟ ಮಾರ್ಗ ದತ್ತ ಸಂಚರಿಸಿದೆ ಎಂದು ಡಿಪೋ ವ್ಯವಸ್ಥಾಪಕರು ತಿಳಿಸಿದ್ದಾರೆ. ಟಿಕೆಟ್ ಇಲ್ಲದೇ ಪ್ರಯಾಣಿಸಿದ ಹಾವು, ಬಸ್ ನಲ್ಲಿನ ಜನ ಜಂಗುಳಿಯ ನಡುವೆ ಯಾರಿಗೂ ‘ ಟಿಕೆಟ್ ‘ ನೀಡದೇ ಹೋದದ್ದು ನಮ್ಮ ಅದೃಷ್ಟ ಎಂದ ಪ್ರಯಾಣಿಕರು ನಿಟ್ಟುಸಿರಿಟ್ಟಿದ್ದಾರೆ.