ಒಬ್ಬನೇ ವ್ಯಕ್ತಿಗೆ ಏಕಕಾಲದಲ್ಲಿ ವಕ್ಕರಿಸಿದ ಮಂಕಿಪಾಕ್ಸ್, ಕೋವಿಡ್ ಮತ್ತು HIV !!!
ಕೊರೊನಾ ಬಂದ ನಂತರ ಈಗ ಎಲ್ಲರೂ ಆರೋಗ್ಯದ ವಿಷಯದಲ್ಲಿ ಭಾರೀ ಜಾಗರೂಕರಾಗಿದ್ದಾರೆ. ಅದರಲ್ಲೂ ಈ ಕೊರೊನಾ ಎಲ್ಲರನ್ನೂ ನಿಜಕ್ಕೂ ಭಯದ ವಾತಾವರಣಕ್ಕೇ ತಳ್ಳಿದಂತೂ ಸುಳ್ಳಲ್ಲ. ಒಂದು ಸಾಮಾನ್ಯ ಜ್ವರನೇ ಮನುಷ್ಯನನ್ನು ಹಿಂಡಿಹಿಪ್ಪೆ ಮಾಡುತ್ತದೆ. ಅಂಥದರಲ್ಲಿ ಓರ್ವ ಮನುಷ್ಯನಿಗೆ ಮೂರು ಮೂರು ಮಾರಣಾಂತಿಕ ರೋಗಗಳು ಏಕಕಾಲದಲ್ಲಿ ವಕ್ಕರಿಸಿಕೊಂಡರೆ ಆತನ ಪಾಡು ಏನಾಗಬೇಡ ? ಇಂಥ ಘಟನೆಯೊಂದು ಈಗ ಇಟಲಿಯಲ್ಲಿ ನಡೆದಿದೆ.
ಇಟಲಿಯಲ್ಲಿ 36 ವರ್ಷದ ವ್ಯಕ್ತಿಯೊಬ್ಬನಿಗೆ ಮಂಕಿಪಾಕ್ಸ್, ಕೋವಿಡ್-19 ಮತ್ತು ಎಚ್‌ಐವಿ (HIV) ಮೂರು ಕೂಡ ಒಟ್ಟಿಗೇ ಪಾಸಿಟಿವ್ ಬಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಈ ವ್ಯಕ್ತಿ ಐದು ದಿನಗಳ ವಿದೇಶಿ ಪ್ರವಾಸದಿಂದ ಹಿಂದಿರುಗಿದ್ದಾನೆ. ಅನಂತರ ಸುಮಾರು ಒಂಬತ್ತು ದಿನಗಳ ನಂತರ ವ್ಯಕ್ತಿಗೆ ಜ್ವರ, ಗಂಟಲು ನೋವು, ಆಯಾಸ, ತಲೆನೋವು ಮತ್ತು ತೊಡೆಸಂದು ಪ್ರದೇಶದ ಉರಿಯೂತ ಪ್ರಾರಂಭವಾಗಿದೆ. ನಂತರ, ಮುಖ ಮತ್ತು ದೇಹದ ಇತರ ಭಾಗಗಳ ಮೇಲೆ ತೀವ್ರವಾದ ಚರ್ಮದ ದದ್ದುಗಳು ಕಾಣಿಸಿಕೊಂಡಿವೆ. ಈ ಎಲ್ಲಾ ರೋಗಲಕ್ಷಣಗಳ ಸ್ಥಿತಿಯ ತೀವ್ರತೆಯಿಂದ ಬಳಲಿದ ವ್ಯಕ್ತಿ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರನ್ನು ದಾಖಲಾತಿಗಾಗಿ ಸಾಂಕ್ರಾಮಿಕ ರೋಗ ಘಟಕಕ್ಕೆ ಡಾಕ್ಟರ್ ದಾಖಲು ಮಾಡಿದ್ದಾರೆ. ಈತನನ್ನು ಪರಿಶೀಲಿಸಿದ ಡಾಕ್ಟರ್ ಆತನಿಗೆ ಮಂಕಿಪಾಕ್ಸ್, ಕೋವಿಡ್, ಹಾಗೂ ಹೆಚ್ ಐವಿ ಯಿಂದ ಬಳಲುತ್ತಿರುವುದಾಗಿ ಪತ್ತೆಯಾಗಿದೆ.
ಹಾಗಾಗಿ ಚಿಕಿತ್ಸೆ ಪ್ರಾರಂಭ ಮಾಡಲಾಗಿದ್ದು, ಸುಮಾರು ಒಂದು ವಾರದ ನಂತರ ವ್ಯಕ್ತಿ ಕೋವಿಡ್ ಹಾಗೂ ಮಂಕಿಪಾಕ್ಸ್‌ನಿಂದ ಚೇತರಿಸಿಕೊಂಡ ಕಾರಣ ಆಗಸ್ಟ್ 19 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಎಚ್‌ಐವಿ ಸೋಂಕಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ದುರದೃಷ್ಟ ಅಂದರೆ ಇದೇ ತಾನೇ ?