ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ: ಸೆ.1ರಿಂದ ‘ಸೇವಾವಹಿ ESR’ನಲ್ಲಿ ನಿರ್ವಹಣೆ ಕಡ್ಡಾಯ
ರಾಜ್ಯ ಸರ್ಕಾರದಿಂದ 2021-22ನೇ ಸಾಲಿನಿಂದ ದಿನಾಂಕ 01-04-2021ರಿಂದ ಸರ್ಕಾರಿ ಸೇವೆಗೆ ಸೇರಿದ ಎಲ್ಲಾ ಅಧಿಕಾರಿ, ನೌಕರರ ಸೇವಾ ವಹಿಗಳನ್ನು ವಿದ್ಯುನ್ಮಾನ ಸೇವಾ ಪುಸ್ತಕ ಅಂದ್ರೇ ESRನಲ್ಲಿ ನಿರ್ವಹಿಸಲು ಕಡ್ಡಾಯಗೊಳಿಸಿ ಆದೇಶಿಸಿದೆ.
ಈ ಕುರಿತು ರಾಜ್ಯ ಸರ್ಕಾರ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯ ಯೋಜನಾ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದು 2021-22ನೇ ಸಾಲಿನಿಂದ ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಳ್ಳುವ ಎಲ್ಲಾ ಅಧಿಕಾರಿ, ನೌಕರರುಗಳ ಸೇವಾ ವಹಿಯನ್ನು ವಿದ್ಯುನ್ಮಾನ ಸೇವಾ ವಹಿ(ESR) ನಲ್ಲಿಯೇ ಅನುಷ್ಠಾನಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲಾ ಸಕ್ಷಮ ಪ್ರಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಈ ಆದೇಶದಂತೆ ತಮ್ಮ ಅಧೀನದಲ್ಲಿ ಬರುವ ಎಲ್ಲಾ ಮುಖ್ಯಸ್ಥರಿಗೆ ತಮ್ಮ ಎಲ್ಲಾ ಕಚೇರಿಗಳ ಅಧಿಕಾರಿಗಳಿಗೆ ಸೂಕ್ತ ಆದೇಶವನ್ನು ನೀಡಿ, ಮುಂದೆ ಹೊಸದಾಗಿ ಸೇರುವ ಎಲ್ಲಾ ಸರ್ಕಾರಿ ನೌಕರರ ಸೇವಾ ವಹಿಯನ್ನು ಹೆಚ್ ಆರ್ ಎಂ ಎಸ್ 2.0 ತಂತ್ರಾಂಶದಲ್ಲಿ ಇಎಸ್ಆರ್ ಮೂಲಕವೇ ಸೇವೆಯ ಎಲ್ಲಾ ವಿವರಗಳನ್ನು ನಿರ್ವಹಿಸುವಂತೆ ಸೂಚಿಸಿದೆ.
ಇನ್ನೂ ಹೆಚ್ ಆರ್ ಎಂ ಎಸ್ 2.0 ನಿರ್ದೇಶನಾಲಯವು ಸೆಪ್ಟೆಂಬರ್ 1, 2022ರಿಂದ ಕೇವಲ Intranet ( KSWAN ) ಅಲ್ಲದೇ Internet https://hrms2ess.karnataka.gov.in ನಲ್ಲಿಯೂ ಸಹ ಇ ಎಸ್ ಆರ್ ಪ್ರಕ್ರಿಯೆ ಲಭ್ಯವಾಗುವಂತೆ ಕ್ರಮಕೈಗೊಂಡಿದೆ.