ಕತ್ತಲಲ್ಲಿ ಮುಳುಗುತ್ತೋ ರಾಜ್ಯ ; ಕರ್ನಾಟಕ ಸೇರಿದಂತೆ 13 ರಾಜ್ಯಗಳಿಗೆ ಇಲ್ಲ ವಿದ್ಯುತ್ ಖರೀದಿಗೆ ಅವಕಾಶ!
ನವದೆಹಲಿ: ಕರ್ನಾಟಕ ಸೇರಿದಂತೆ 13 ರಾಜ್ಯಗಳು ಪವರ್ ಎಕ್ಸ್‌ಚೇಂಜ್‌ಗಳಿಂದ ವಿದ್ಯುತ್ ಖರೀದಿಗೆ ಅವಕಾಶ ನೀಡದಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ಸುದೀರ್ಘ ಅವಧಿಯಿಂದ ಹಣ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ 27 ವಿದ್ಯುತ್ ವಿತರಣಾ ಕಂಪನಿಗಳಿಗೆ ವಿದ್ಯುತ್ ಖರೀದಿ ಮಾಡದಂತೆ ಕೇಂದ್ರ ಸರ್ಕಾರ ನಿಷೇಧಿಸಿದೆ. ಹೀಗಾಗಿ ಈ ರಾಜ್ಯಗಳಲ್ಲಿ ವಿದ್ಯುತ್ ಕ್ಷಾಮ ಎದುರಾಗುವ ಭೀತಿ ಎದುರಾಗಿದ್ದು, ಪವರ್ ಕಟ್ ಅನಿವಾರ್ಯವಾಗಿದೆ.
ಇದೀಗ ಕರ್ನಾಟಕ ಸೇರಿದಂತೆ 13 ರಾಜ್ಯಗಳು ವಿವಿಧ ವಿದ್ಯುತ್ ಎಕ್ಸ್‌ಚೇಂಜ್‌ಗಳಿಗೆ 5000 ಕೋಟಿ ರು.ಗೂ ಹೆಚ್ಚಿನ ಹಣ ಬಾಕಿ ಉಳಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಆ.19ರಿಂದಲೇ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೂ 13 ರಾಜ್ಯಗಳಿಗೆ ವಿದ್ಯುತ್ ಖರೀದಿಗೆ ಅವಕಾಶ ನೀಡದಂತೆ ಕೇಂದ್ರ ಸರ್ಕಾರದ ಅಧೀನದ ‘ಪವರ್ ಸಿಸ್ಟಮ್ ಆಪರೇಷನ್ ಕಾರ್ಪೊರೇಷನ್ ಲಿ.’ ವಿದ್ಯುತ್ ಎಕ್ಸ್‌ಚೇಂಜ್‌ಗಳಿಗೆ ಸೂಚಿಸಿದೆ.
ವಿದ್ಯುತ್ ಎಕ್ಸ್‌ಚೇಂಜ್‌ಗಳಿಂದ ಖರೀದಿ ಮಾಡಿದ ವಿದ್ಯುತ್‌ಗೆ ಹಣ ಪಾವತಿ ಮಾಡಲು 7 ತಿಂಗಳ ಅವಕಾಶ ನೀಡಲಾಗಿರುತ್ತದೆ. ಆ ಅವಧಿಯಲ್ಲೂ ಹಣ ಪಾವತಿ ಮಾಡದೇ ಇದ್ದರೆ ವಿದ್ಯುತ್ ವಿತರಣಾ ಕಂಪನಿಗಳಿಗೆ ವಿದ್ಯುತ್ ಎಕ್ಸ್‌ಚೇಂಜ್‌ಗಳಿಂದ ಅಗತ್ಯ ಪ್ರಮಾಣದ ವಿದ್ಯುತ್ ಖರೀದಿಗೆ ನಿಷೇಧ ಹೇರಲಾಗುತ್ತದೆ. ಕರ್ನಾಟಕದಲ್ಲಿ ಬೆಸ್ಕಾಂ, ಜೆಸ್ಕಾಂ, ಹೆಸ್ಕಾಂ, ಚೆಸ್ಕಾಂಗಳು ವಿದ್ಯುತ್ ಖರೀದಿ ಬಿಲ್ ಬಾಕಿ ಉಳಿಸಿಕೊಂಡಿವೆ.
ವಿದ್ಯುತ್ ಬೇಡಿಕೆ ಕಡಿಮೆ ಇದ್ದಾಗ, ರಾಜ್ಯಗಳು ವಿದ್ಯುತ್ ಎಕ್ಸ್‌ಚೇಂಜ್ ಮೂಲಕ ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತವೆ. ಬೇಡಿಕೆ ಹೆಚ್ಚಾಗಿ, ಉತ್ಪಾದನೆ ಕಡಿಮೆ ಇದ್ದಾಗ ಎಕ್ಸ್‌ಚೇಂಜ್‌ಗಳಿಂದ ಖರೀದಿ ಮಾಡುತ್ತವೆ. ಇದೀಗ ನಿಷೇಧ ಜಾರಿಯಾಗಿರುವ ಹಿನ್ನೆಲೆಯಲ್ಲಿ ಪವರ್ ಎಕ್ಸ್‌ಚೇಂಜ್‌ಗಳಿಂದ ಖರೀದಿ ಮಾಡುವುದು ಸಾಧ್ಯವಾಗುವುದಿಲ್ಲ. ಆಗ ವಿದ್ಯುತ್ ಕ್ಷಾಮ ಎದುರಾಗುತ್ತದೆ.