ಮತ್ತೊಮ್ಮೆ ಶಾಲೆಗಳಲ್ಲಿ ಶುರುವಾಗುತ್ತಾ ಧರ್ಮಸಂಘರ್ಷ! | ಗಣೇಶೋತ್ಸವ ಆಚರಣೆ ಕುರಿತ ಸಚಿವರ ಸ್ಪಷ್ಟನೆಗೆ ವಕ್ಫ್‌ ಬೋರ್ಡ್‌ ವಿರೋಧ

ಬೆಂಗಳೂರು : ದಿನೇ ದಿನೇ ರಾಜ್ಯದಲ್ಲಿ ಕೋಮುಸಾಮರಸ್ಯ ಕದಡುವಂತಹ ನೂರಾರು ಘಟನೆಗಳು ನಡೆಯುತ್ತಲೇ ಇದೆ.‌ ಶಾಲಾ‌ಕಾಲೇಜುಗಳಲ್ಲಿ ಹಿಜಾಬ್ ವಿವಾದದ ಬೆನ್ನಲ್ಲೇ ಮತ್ತೊಮ್ಮೆ ವಿವಾದದ ಕೇಂದ್ರವಾಗೋ ಸಾಧ್ಯತೆ ಇದೆ. ಹೌದು. ಗಣೇಶೋತ್ಸವ ದಂಗಲ್ ವಿವಾದ ಭುಗಿಲೇಳುವ ಸಾಧ್ಯತೆ ಇದೆ.

 

ಶಿಕ್ಷಣ ಇಲಾಖೆಯಿಂದ ಸರ್ಕಾರಿ ಶಾಲೆಗಳಲ್ಲಿ ಗಣೇಶನ ಕೂಡಿಸಲು ಮೌಖಿಕ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕೊರೋನಾದಿಂದ ಕಳೆದ ಎರಡು ವರ್ಷಗಳಿಂದ ಶಾಲಾ ಕಾಲೇಜುಗಳಲ್ಲಿ ಗೌರಿ ಗಣೇಶ ಹಬ್ಬ ಆಚರಣೆ ಮಾಡಿರಲಿಲ್ಲ. ಈ ಬಾರಿ ಕೊರೋನಾ ಇಳಿಮುಖವಾದ ಹಿನ್ನೆಲೆಯಲ್ಲಿ ಗೌರಿ ಗಣೇಶ ಕೂರಿಸಲು ಅನುಮತಿ ನೀಡಲಾಗಿದೆ ಅನ್ನೋ ಮಾಹಿತಿ ಸಿಕ್ಕಿದೆ.

ಅಲ್ಲದೆ ಈ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ಪ್ರಾರಂಭಿಸಿರುವ ಶಾಲೆಗಳಲ್ಲಿ ಗಣೇಶನನ್ನ ಪ್ರತಿಷ್ಠಾಪಿಸಲು ಮುಕ್ತ ಅವಕಾಶ ಕೊಡಲಾಗಿದೆ. ಶಾಲೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕಂಪ್ಲೀಟ್ ಸ್ವಾತಂತ್ರ್ಯ ನೀಡಲಾಗಿದ್ದು, ಯಾವುದೇ ನಿರ್ಬಂಧವನ್ನ ಶಿಕ್ಷಣ ಇಲಾಖೆ ಹಾಕಿಲ್ಲ ಎಂದು ತಿಳಿದು ಬಂದಿದೆ.

ತಿಂಗಳಾಂತ್ಯಕ್ಕೆ ಗಣೇಶ ಚತುರ್ಥಿ ಹಬ್ಬವಿದ್ದು, ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಶಾಲಾ ಕಾಲೇಜುಗಳಲ್ಲೂ ಅದ್ದೂರಿಯಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರ ನೆರವೇರಿಸುವ ಪದ್ಧತಿ ಇದೆ. ಆದರೆ ಈ ವರ್ಷ ಶಾಲಾ ಕಾಲೇಜುಗಳಲ್ಲಿ ಯಾವ ಕಾರಣಕ್ಕೂ ಗಣೇಶ ಮೂರ್ತಿ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಎಸ್ಡಿಪಿಐ ಸೇರಿದಂತೆ ಹಲವು ಸಂಘಟನೆಗಳು ಆಗ್ರಹಿಸಿವೆ.

ಇದಕ್ಕೆ ಹೈಕೋರ್ಟ್ ಆದೇಶವನ್ನೇ ಉಲ್ಲೇಖಿಸುತ್ತಿರುವ ಸಂಘಟನೆಗಳು ಹೈಕೋರ್ಟ್ ಹಿಜಾಬ್ ಸಂದರ್ಭದಲ್ಲೇ ಶಾಲಾ ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ ಸಂಗತಿಗಳನ್ನು ಆಚರಿಸುವಂತಿಲ್ಲ. ಧಾರ್ಮಿಕ ಕುರುಹುಗಳನ್ನು ಬಳಸುವಂತಿಲ್ಲ ಎಂದು ಆದೇಶಿಸಿದೆ ಎಂದು ವಾದಿಸುತ್ತಿದ್ದಾರೆ. ಹೀಗಾಗಿ ನಿಧಾನಕ್ಕೆ ರಾಜ್ಯದಲ್ಲಿ ಮತ್ತೊಮ್ಮೆ ಧರ್ಮಸಂಘರ್ಷ ಶುರುವಾಗುವ ಸಾಧ್ಯತೆ ಇದೆ.

ಆದರೆ ಈ ವಿವಾದಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯಿಸಿದ್ದು, ಶಾಲೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರದಲ್ಲಿ ಸರ್ಕಾರದ ನಿಲುವು ಏನು ಇಲ್ಲ. ನಾವು ಶಾಲೆಗಳಲ್ಲಿ ಗಣೇಶ್ ಮೂರ್ತಿ ಸ್ಥಾಪನೆ ಮಾಡಲು ಸೂಚಿಸಿಲ್ಲ. ಮೂರ್ತಿ ಸ್ಥಾಪನೆಗೆ ವಿರೋಧವೂ ಇಲ್ಲ. ಅದು ಆಯಾ ಶಾಲೆಗಳಿಗೆ ಬಿಟ್ಟ ವಿಚಾರ.

ಇನ್ನೊಂದು ಗಮನಿಸಬೇಕಾದ ವಿಚಾರ ಎಂದರೇ ಗಣೇಶೋತ್ಸವ ಯಾವುದೇ ಧಾರ್ಮಿಕ ಆಚರಣೆಯಲ್ಲ. ಇದು ಸ್ವಾತಂತ್ರ್ಯೋತ್ಸವದ ಕಾಲದಿಂದಲೂ ಜನರನ್ನು ಸಂಘಟಿಸಲು ಬಳಸುತ್ತಿದ್ದ ಒಂದು ಉತ್ಸವದ ಮಾದರಿ. ಹೀಗಾಗಿ ಗಣೇಶೋತ್ಸವವನ್ನು ಧಾರ್ಮಿಕ ಆಚರಣೆಯಂದು ಪರಿಗಣಿಸುವ ಅಗತ್ಯವಿಲ್ಲ ಎಂದು ಸಚಿವರು ಪ್ರತಿಕ್ರಿಯಿಸಿದ್ದಾರೆ.

ಸಚಿವ ಬಿ.ಸಿ. ನಾಗೇಶ್‌ ಹೇಳಿಕೆಗೆ ವಕ್ಫ್‌ ಬೋರ್ಡ್‌ ಪರೋಕ್ಷವಾಗಿ ಟಾಂಗ್‌ ಕೊಟ್ಟಿದೆ. ಶಿಕ್ಷಣ ಸಚಿವರ ತೀರ್ಮಾನವನ್ನ ಸ್ವಾಗತಿಸುತ್ತೇವೆ, ಜತೆಗೆ ಶಿಕ್ಷಣ ಇಲಾಖೆಗೆ ಕೆಲವು ಬೇಡಿಕೆಗಳನ್ನ ಇಟ್ಟಿದೆ. ನಮ್ಮ ಧಾರ್ಮಿಕ ಅಚರಣೆಗಳಿಗೂ, ಹಬ್ಬಗಳ ಆಚರಣೆಗೂ ಅವಕಾಶ ಮಾಡಿಕೊಡಬೇಕು, ಶಾಲೆಗಳಲ್ಲಿ ಈದ್‌ಮಿಲಾದ್‌ ಆಚರಣೆಗೂ ಅವಕಾಶ ಕೊಡಬೇಕು, ನಮಾಜ್‌ಗೆ ಪ್ರತ್ಯೇಕ ಕೊಠಡಿ ಮೀಸಲಿಡುವಂತೆ ವಕ್ಫ್‌ ಬೋರ್ಡ್‌ ಮನವಿ ಮಾಡಿದೆ.

Leave A Reply

Your email address will not be published.