ಗ್ರಾಮ ಒನ್ ಕೇಂದ್ರಕ್ಕೆ ಸೇರ್ಪಡೆಗೊಳ್ಳಲಿದೆ ಮತ್ತಷ್ಟು ನಾಗರಿಕ ಸೇವೆಗಳು

ಬೆಂಗಳೂರು : ಗ್ರಾಮ ಒನ್ ಕೇಂದ್ರಗಳನ್ನು ಬಲಪಡಿಸಲು ಇನ್ನಷ್ಟು ಸೇವೆಗಳನ್ನು ಸೇರ್ಪಡೆಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

 

ಗ್ರಾಮ ಪಂಚಾಯತ್ ಮಟ್ಟದಲ್ಲಿಯೇ ನಾಗರಿಕ ಸೇವೆಗಳನ್ನು ಒದಗಿಸಲು ಪ್ರಾರಂಭಿಸಲಾಗಿರುವ ಗ್ರಾಮ ಒನ್ ಕೇಂದ್ರಗಳ ಮೂಲಕ ಒದಗಿಸಬಹುದಾದ ಸೇವೆಗಳನ್ನು ಗುರುತಿಸಿ, ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು. ವಿವಿಧ ಜಿಲ್ಲೆಗಳಿಗೇ ವಿಶಿಷ್ಟವಾದ ಸೇವೆಗಳನ್ನು ಆಯಾ ಜಿಲ್ಲೆಗಳಿಗೆ ಸೀಮಿತಗೊಳಿಸಿ ಗ್ರಾಮ ಒನ್ ಕೇಂದ್ರಗಳಲ್ಲಿ ಒದಗಿಸಬೇಕು. ಜೊತೆಗೆ ಮೈಕ್ರೋ ಬ್ಯಾಂಕಿಂಗ್, ಎಲ್ ಪಿ ಜಿ ಬುಕಿಂಗ್ ಮತ್ತಿತರ ಕೆಲವು ಸೇವೆಗಳನ್ನು ಒದಗಿಸಲು ಅವಕಾಶ ಕಲ್ಪಿಸಬಹುದು ಎಂದು ಗೃಹ ಕಚೇರಿ ಕೃಷ್ಣಾದಲ್ಲಿ ಇ-ಆಡಳಿತ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ಹೋಬಳಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಟಲ್ ಜನಸ್ನೇಹಿ ಕೇಂದ್ರಗಳ ಸೇವೆಯನ್ನು ಗ್ರಾಮ ಒನ್ ಮೂಲಕವೂ ಒದಗಿಸುವ ಬಗ್ಗೆ ಪ್ರಾಯೋಗಿಕವಾಗಿ ಕೆಲವು ಕೇಂದ್ರಗಳಲ್ಲಿ ಪ್ರಾರಂಭಿಸಲು ಮುಖ್ಯಮಂತ್ರಿಗಳು ಸೂಚಿಸಿದರು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈ ವರೆಗೆ ಒಟ್ಟು 7274 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, 2022ರ ಜನವರಿಯಲ್ಲಿ 65,520 ವ್ಯವಹಾರ ನಡೆದಿದ್ದು, ಜೂನ್ ತಿಂಗಳಲ್ಲಿ 10,36,542 ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ರಾಜ್ಯದಲ್ಲಿ ಹೊಸ ಡಾಟಾ ಸೆಂಟರ್ ಪ್ರಾರಂಭಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಹೊಸ ಡಾಟಾ ಸೆಂಟರ್ ಸ್ಥಾಪನೆಗೆ ಸೂಕ್ತ ಸ್ಥಳ ನಿಗದಿಪಡಿಸುವಂತೆ ಮುಖ್ಯಮಂತ್ರಿಯವರು ಸೂಚಿಸಿದರು. ಪಿಎಂ ಗತಿಶಕ್ತಿ ಯೋಜನೆಯಡಿ ರಾಜ್ಯದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಡ್ರೋನ್ ಸ್ಕೂಲ್ ಪ್ರಾರಂಭಿಸಲು ಸಿದ್ಧತೆ ನಡೆಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಕುಟುಂಬ ತಂತ್ರಾಂಶದ ಮಾಹಿತಿಯನ್ನಾಧರಿಸಿ, ರಾಜ್ಯದಲ್ಲಿ ಹಲವು ಯೋಜನೆಗಳಡಿ ನಾಗರಿಕರು ಅರ್ಜಿ ಸಲ್ಲಿಸದೆಯೇ ವಿವಿಧ ಸವಲತ್ತುಗಳನ್ನು ನೀಡಲಾಗುತ್ತಿದೆ. ಇದೀಗ ಮುಖ್ಯಮಂತ್ರಿಯವರು ಇತ್ತೀಚೆಗೆ ಘೋಷಿಸಿರುವ 75 ಯುನಿಟ್ ಉಚಿತ ವಿದ್ಯುತ್ ನೀಡುವ ಅಮೃತ ಜ್ಯೋತಿ ಯೋಜನೆ, ನೇಕಾರರ ಮಕ್ಕಳ ವಿದ್ಯಾರ್ಥಿ ವೇತನ ಮತ್ತಿತರ ಕಾರ್ಯಕ್ರಮಗಳಿಗೆ ಈ ದತ್ತಾಂಶವನ್ನು ಆಧರಿಸಿ ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಮಗ್ರ ಕುಂದು ಕೊರತೆ ನಿವಾರಣಾ ವ್ಯವಸ್ಥೆಯಡಿ ದೂರುದಾರರಿಗೆ ತೃಪ್ತಿಕರ ಸೇವೆಯನ್ನು ಒದಗಿಸಲು ಒತ್ತು ನೀಡಬೇಕೆಂದು ಮುಖ್ಯಮಂತ್ರಿಗಳು ತಿಳಿಸಿದರು. ಇನ್ನು ಇ-ಆಡಳಿತ ಉತ್ತಮ ಆಡಳಿತದ ಪ್ರಮುಖ ಸಾಧನ. ಇದನ್ನು ಹೆಚ್ಚಾಗಿ ಬಳಸಿ ಸರ್ಕಾರದ ಸವಲತ್ತುಗಳನ್ನು ಜನರಿಗೆ ಪಾರದರ್ಶಕವಾಗಿ ತಲುಪಿಸಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.

Leave A Reply

Your email address will not be published.