ವಸತಿ ಗೃಹಗಳ ಬಾಡಿಗೆಗೆ ಇಲ್ಲ ಜಿಎಸ್ ಟಿ – ಕೇಂದ್ರ ಸರ್ಕಾರ ಸ್ಪಷ್ಟನೆ

ನವದೆಹಲಿ: ವಸತಿ ಗೃಹಗಳ ಬಾಡಿಗೆಯ ಮೇಲೆ ಶೇ 18 ಜಿಎಸ್‌ಟಿ ವಿಧಿಸಲಾಗಿದ್ದು, ಇದು ಮೋದಿ ಸರ್ಕಾರದ ಅಚ್ಛೇ ದಿನಕ್ಕೆ ಉದಾಹರಣೆಯಾಗಿದೆಎಂದು ಕಾಂಗ್ರೆಸ್ ಟೀಕಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ‘ವೈಯಕ್ತಿಕ ಬಳಕೆಗಾಗಿ ಮನೆಗಳನ್ನು ಬಾಡಿಗೆಗೆ ಪಡೆದರೆ ಜಿಎಸ್‌ಟಿ ಅನ್ವಯಿಸುವುದಿಲ್ಲ’ ಎಂದು ಸ್ಪಷ್ಟನೆ ನೀಡಿದೆ.

 

ಮನೆಗಳ ಬಾಡಿಗೆ ಮೇಲಿನ ಜಿಎಸ್‌ಟಿ ಕುರಿತು ಟ್ವೀಟ್‌ ಮಾಡಿದ್ದ ದೆಹಲಿ ಘಟಕದ ಕಾಂಗ್ರೆಸ್ ಉಪಾಧ್ಯಕ್ಷ ಮುದಿತ್ ಅಗರ್ವಾಲ್‌, ‘ವಸತಿ ಗೃಹಗಳ ಬಾಡಿಗೆಯ ಮೇಲೆ ಶೇ 18 ಜಿಎಸ್‌ಟಿ ವಿಧಿಸಲಾಗಿದೆ. ಇದು ಮೋದಿ ಸರ್ಕಾರದ ಅಚ್ಛೇ ದಿನಕ್ಕೆ ಉದಾಹರಣೆಯಾಗಿದೆ’ ಎಂದು ತಿಳಿಸಿದ್ದರು.

ಈ ಟ್ವೀಟ್‌ ಅನ್ನು ಹಂಚಿಕೊಂಡಿದ್ದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ‘ನಿತ್ಯ ಬಳಕೆಯ ಆಹಾರ ಪದಾರ್ಥಗಳ ಮೇಲಿನ ಅರ್ಥಹೀನ ಜಿಎಸ್‌ಟಿ ನಂತರ ಈಗ ಇದನ್ನು ವಿಧಿಸಲಾಗಿದೆ. ಇದು ಅಸಲಿ ಮಾಟ-ಮಂತ್ರ’ ಎಂದು ಹೇಳಿದ್ದರು.

ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ‘ಖಾಸಗಿ ವ್ಯಕ್ತಿಗಳಿಗೆ ವೈಯಕ್ತಿಕ ಬಳಕೆಗಾಗಿ ಬಾಡಿಗೆಗೆ ನೀಡಿರುವ ವಸತಿ ಕಟ್ಟಡಗಳಿಗೆ ಜಿಎಸ್‌ಟಿ ಅನ್ವಯವಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ. ಬಾಡಿಗೆಗೆ ಇರುವವರು ಪಾವತಿ ಮಾಡುವ ಬಾಡಿಗೆ ಮೊತ್ತದ ಮೇಲೆ ಶೇಕಡ 18ರಷ್ಟು ಜಿಎಸ್‌ಟಿ ಕೊಡಬೇಕಾಗುತ್ತದೆ ಎಂಬ ವರದಿಗಳು ತಪ್ಪು ಎಂದು ಸರ್ಕಾರವು ಹೇಳಿದೆ. ವಸತಿ ಕಟ್ಟಡವನ್ನು ವಾಣಿಜ್ಯ ಸಂಸ್ಥೆಗೆ ಬಾಡಿಗೆಗೆ ನೀಡಿದಾಗ ಮಾತ್ರ ಜಿಎಸ್‌ಟಿ ಸಂಗ್ರಹ ಮಾಡಲಾಗುತ್ತದೆ ಎಂದು ಕೇಂದ್ರವು ಟ್ವೀಟ್ ಮಾಡಿದೆ.

Leave A Reply

Your email address will not be published.