ತೆಂಗಿನ ಕಾಯಿ ಕೀಳುವ ಕಾರ್ಮಿಕರಿಗೆ ವಿಮಾ ಸೌಲಭ್ಯ ; ಈ ಸೌಲಭ್ಯ ಪಡೆಯುವ ವಿಧಾನ ಇಲ್ಲಿದೆ ನೋಡಿ..

ತೆಂಗಿನ ಕಾಯಿ ಕೀಳುವ ಕಾರ್ಮಿಕರ ಜೀವಕ್ಕೆ ಭದ್ರತೆ ನೀಡುವ ಉದ್ದೇಶದಿಂದ ತೆಂಗು ಅಭಿವೃದ್ಧಿ ಮಂಡಳಿಯ ಯೋಜನೆಯೊಂದು ಚಾಲ್ತಿಯಲ್ಲಿದ್ದು, ಇದರಿಂದ ವಿಮಾ ಸೌಲಭ್ಯ ಪಡೆಯಬಹುದಾಗಿದೆ.

 

ತೆಂಗಿನಕಾಯಿ ಕೀಳುವಾಗ ಅಥವಾ ನೀರಾ ತೆಗೆಯುವ ಸಂದರ್ಭ ಮರದಿಂದ ಬಿದ್ದು ಮೃತಪಟ್ಟರೆ, ಗಾಯ ಅಥವಾ ಅಂಗವೈಕಲ್ಯಕ್ಕೊಳಗಾದರೆ ಈ ಯೋಜನೆ ಪರಿಹಾರ ಒದಗಿಸುತ್ತದೆ. ಅಲ್ಲದೆ ಆಸ್ಪತ್ರೆ ವೆಚ್ಚ ಮುಂತಾದ ಸೌಕರ್ಯಗಳನ್ನು “ಕೇರಾ ಸುರಕ್ಷ ವಿಮೆ’ ನೀಡುತ್ತದೆ.

ಯೋಜನೆಯನ್ನು ತೆಂಗು ಅಭಿವೃದ್ಧಿ ಮಂಡಳಿ ಮತ್ತು ಖಾಸಗಿ ವಿಮಾ ಕಂಪೆನಿಯ ಸಹಯೋಗ ದಲ್ಲಿ ರೂಪಿಸಲಾಗಿದೆ. ವಿಮೆಯ ವಾರ್ಷಿಕ ಮೊತ್ತ 398.65 ರೂ. ಆದರೆ ಇದಕ್ಕೆ ರೈತರಿಂದ ಕೇವಲ 99 ರೂ. ಪಡೆಯಲಾಗುತ್ತದೆ. ಉಳಿದ 299.65 ರೂ. ಮೊತ್ತವನ್ನು ಮಂಡಳಿ ಭರಿಸುತ್ತದೆ.

ವಿಮೆಗೆ ಒಳಪಟ್ಟ ಕಾರ್ಮಿಕ ತೆಂಗಿನ ಮರದಿಂದ ಬಿದ್ದು ಮೃತಪಟ್ಟರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೊಳಗಾದರೆ 5 ಲಕ್ಷ ರೂ., ಭಾಗಶಃ ಅಂಗವಿಕಲರಾದರೆ 2.50 ಲಕ್ಷ ರೂ., ಗಾಯಾಳುವಾದರೆ ಆಸ್ಪತ್ರೆ ವೆಚ್ಚ 1 ಲಕ್ಷ ರೂ., ಆಯಂಬುಲೆನ್ಸ್‌ ವೆಚ್ಚ 3 ಸಾವಿರ ರೂ. ಹಾಗೂ ಪೂರ್ಣ ಅಂಗವೈಕಲ್ಯಕ್ಕೆ ಆರು ವಾರಗಳಿಗೆ 18 ಸಾವಿರ ರೂ., ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ಜತೆಗಾರರಿಗೆ ಸೇವಾ ಶುಲ್ಕವಾಗಿ ಮೂರು ಸಾವಿರ ರೂ. ಮತ್ತು ಅಂತ್ಯಸಂಸ್ಕಾರ ಪರಿಹಾರ ಐದು ಸಾವಿರ ರೂ.ವನ್ನು ನೀಡಲಾಗುತ್ತಿದೆ.

ಆದರೆ, ಈ ವಿಮಾ ಸೌಲಭ್ಯದ ಕುರಿತು ಬಹುತೇಕ ಕಾರ್ಮಿಕರಿಗೆ ಇದರ ಮಾಹಿತಿ ಇಲ್ಲ. ಆ ಕಾರಣದಿಂದ ಇಂತಹ ಕಾರ್ಮಿಕರು ಎಷ್ಟು ಜನ ಇದ್ದಾರೆ ಎಂಬ ಅಧಿಕೃತ ಮಾಹಿತಿಯೂ ಇಲಾಖೆಯ ಬಳಿ ಇಲ್ಲ. ಕಾರ್ಮಿಕರು ತಾವಾಗಿಯೇ ಮುಂದೆ ಬಂದು ನೋಂದಾಯಿಸಿಕೊಂಡರೆ ಮಾತ್ರ ಫ‌ಲಾನುಭವಿಗಳಾಗಬಹುದು. ಪ್ರಸ್ತುತ ಗ್ರಾಮಸಭೆಗಳಲ್ಲಿ ತೋಟಗಾರಿಕೆ ಇಲಾಖೆಯವರು ಈ ಕುರಿತು ಕಿರು ಮಾಹಿತಿ ನೀಡುತ್ತಿದ್ದಾರೆ. ದ.ಕ. ಜಿಲ್ಲೆಯಲ್ಲಿ ಕೆವಿಕೆ ವತಿಯಿಂದ ತೆಂಗಿನ ಮರ ಏರುವ ತರಬೇತಿ ಪಡೆಯುವವರಿಗೆ ವಿಮೆ ಮಾಡಿಸಲಾಗುತ್ತಿದೆ.

ಈ ಸೌಲಭ್ಯ ಪಡೆಯಲು, ತೆಂಗಿನ ಕಾಯಿ ಕೀಳುವ ಅಥವಾ ನೀರಾ ಕಾರ್ಮಿಕ ಎನ್ನುವುದಕ್ಕೆ ದಾಖಲೆಯಾಗಿ ಗ್ರಾ.ಪಂ. ಅಧ್ಯಕ್ಷರ ದೃಢೀಕರಣ ಪತ್ರವೊಂದಿದ್ದರೆ ಸಾಕು. ಅನಂತರ www.coconutboard.gov.in ನಿಂದ ನಿಗದಿತ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ, ವಿಮಾ ಕಂತಿನ ಮೊತ್ತ 99 ರೂ.ಗಳನ್ನು ತೆಂಗು ಅಭಿವೃದ್ಧಿ ಮಂಡಳಿಗೆ ಪಾವತಿಯಾಗುವಂತೆ ಡಿಡಿ/ನೆಲ್‌/ಭೀಮ್‌/ಫೋನ್‌ ಪೇ /ಗೂಗಲ್‌ ಪೇ /ಪೇಟಿಎಂ ಮೂಲಕ ಪಾವತಿಸಿ.

ಬಳಿಕ ದಾಖಲೆಯನ್ನು ತೋಟಗಾರಿಕೆ ಇಲಾಖೆಯ ತಾಲೂಕು ಕಚೇರಿಗೆ ಹಸ್ತಾಂತರಿಸಿ ಸ್ವೀಕೃತಿ ಪಡೆಯಬೇಕು ಮತ್ತು ಪಾಲಿಸಿ ಬಾಂಡ್‌ ಪಡೆಯಬೇಕು. ಅಪಘಾತ ಸಂಭವಿಸಿ ಸಾವು ಸಂಭವಿಸಿದಲ್ಲಿ ಅಥವಾ ಅಂಗವೈಕಲ್ಯ ಹೊಂದಿದಲ್ಲಿ 7 ದಿನಗಳ ಒಳಗಾಗಿ ಮಂಡಳಿಗೆ ತಿಳಿಸಿ ಯೋಜನೆಯ ಪ್ರಯೋಜನ ಪಡೆಯಬಹುದು.

Leave A Reply

Your email address will not be published.