Home ಬೆಂಗಳೂರು ಪ್ರವಾಹ ಪೀಡಿತ ಜಿಲ್ಲೆಗಳಿಗೆ 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ ಸಿ.ಎಂ ಬೊಮ್ಮಾಯಿ

ಪ್ರವಾಹ ಪೀಡಿತ ಜಿಲ್ಲೆಗಳಿಗೆ 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ ಸಿ.ಎಂ ಬೊಮ್ಮಾಯಿ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಮಳೆಯ ಆರ್ಭಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸಿ. ಎಂ ಬೊಮ್ಮಾಯಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.

ಸಿಎಂ ಬೊಮ್ಮಾಯಿ ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಚಿವರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ, ಭೂಕುಸಿತ, ಬೆಳೆಹಾನಿ ಮೊದಲಾದ ವಿಷಯಗಳ ಕುರಿತು ಮಾಹಿತಿ ಪಡೆದರು. ಈ ವೇಳೆ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಹಣದ ಕೊರತೆ ಇಲ್ಲ. ಇಂದು 21 ಜಿಲ್ಲೆಗಳಿಗೆ 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಜೀವಹಾನಿ, ಮನೆ ಹಾನಿ ಪ್ರಕರಣಗಳಲ್ಲಿ ತ್ವರಿತವಾಗಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಅತಿವೃಷ್ಟಿಯಿಂದ ಹಾನಿಗೊಳಗಾಗಿ ಸಂಪರ್ಕ ಕಡಿತವಾಗುವ ರಸ್ತೆ, ಸೇತುವೆಗಳ ದುರಸ್ತಿಯನ್ನು ಕೂಡಲೇ ಕೈಗೊಂಡು, ಸಂಪರ್ಕ ಮರುಸ್ಥಾಪಿಸಬೇಕು. ಅಂತೆಯೇ ವಿದ್ಯುತ್ ಕಂಬಗಳು, ಟ್ರಾನ್ಸ್ಫಾರ್ಮರ್ಗಳ ಹಾನಿ ಕುರಿತೂ ಸಹ ಜಾಗೃತರಾಗಿ, ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ತ್ವರಿತವಾಗಿ ಮರುಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಇದಕ್ಕಾಗಿ ಎಸ್ಕಾಂ ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹೆಚ್ಚುವರಿ ವಿದ್ಯುತ್ ಕಂಬಗಳು, ಟ್ರಾನ್ಫಾರ್ಮರುಗಳ ದಾಸ್ತಾನು ಖಾತರಿಪಡಿಸಲು ಸೂಚಿಸಿದರು. ಬೆಳೆಹಾನಿ ಜಂಟಿ ಸಮೀಕ್ಷೆಯನ್ನು ತ್ವರಿತವಾಗಿ ನಡೆಸಿ, ಬೆಳೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಹಾನಿ ಸಮೀಕ್ಷೆ ವಾಸ್ತವಿಕವಾಗಿರಬೇಕು ಎಂದು ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.

ರಾಜ್ಯದಲ್ಲಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ವ್ಯವಸ್ಥೆಯನ್ನು ಬಲಪಡಿಸಲು ಇನ್ನೂ ಎರಡು ಎಸ್ ಡಿಆರ್‌ಎಫ್ ತಂಡಗಳನ್ನು ರಚಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಹಾಗೆಯೇ, ಗದಗ ಜಿಲ್ಲೆಯ ಬೆಣ್ಣಿಹಳ್ಳ, ಹಾವೇರಿ ಜಿಲ್ಲೆಯ ವರದಾ ನದಿ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ದಿಢೀರ್ ಪ್ರವಾಹ ಉಂಟಾಗುವ ಸ್ಥಳಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು. ಅಣೆಕಟ್ಟುಗಳಿಂದ ನೀರು ಬಿಡುಗಡೆ ಮಾಡುವಾಗ ಅಣೆಕಟ್ಟುಗಳ ಕೆಳ ಭಾಗದ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡಬೇಕು. ರಾಜ್ಯದ ಹಲವಾರು ಕೆರೆಗಳು ತುಂಬಿದ್ದು, ಅಪಾಯದ ಅಂಚಿನ ಕೆರೆಗಳು ಒಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಣ್ಣಿನ ಕುಸಿತ, ಭೂಕುಸಿತದ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಜನರನ್ನು ಕಡ್ಡಾಯವಾಗಿ ಸ್ಥಳಾಂತರಿಸಬೇಕು. ರಸ್ತೆಗಳ ಮೇಲೆ ಭೂಕುಸಿತ ಉಂಟಾದಲ್ಲಿ ತೆರವುಗೊಳಿಸಲು ತಂಡಗಳನ್ನು ದಿನದ 24 ಗಂಟೆಯೂ ಸನ್ನದ್ಧವಾಗಿರಿಸುವಂತೆ ಸೂಚಿಸಿದರು. ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಉತ್ತಮ ಆಹಾರ ಒದಗಿಸಬೇಕು. ಕಾಳಜಿ ಕೇಂದ್ರಕ್ಕೆ ಬರದ ನಿರಾಶ್ರಿತರಿಗೆ ಡ್ರೈ ರೇಷನ್ ಕಿಟ್ ಒದಗಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಈ ಸಭೆಯಲ್ಲಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಡಾ.ಸಿ.ಎನ್. ಅಶ್ವತ್ಥನಾರಾಯಣ, ನಾರಾಯಣಗೌಡ, ಗೋಪಾಲಯ್ಯ, ಬಿ.ಎ. ಬಸವರಾಜ, ಆರಗ ಜ್ಞಾನೇಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.