ಹೆತ್ತಬ್ಬೆಯನ್ನು ದೇವಸ್ಥಾನದಲ್ಲಿ ಬಿಟ್ಟು ಹೋದ ಪಾಪಿ ಮಗ!
ತಾಯಿಕ್ಕಿಂತ ಮಿಗಿಲಾದ ದೇವರಿಲ್ಲ. ಇಂತಹ ದೇವತೆಯೂ ತನ್ನ ಮಗುವಿಗಾಗಿ ಪ್ರತಿ ಕ್ಷಣ ಹಂಬಲಿಸುತ್ತಾಳೆ. ಆದರೆ, ಮಕ್ಕಳಾದವರು ತಾಯಿಗೆ ವಯಸ್ಸಾಗುತ್ತಿದ್ದಂತೆ ಆಕೆಯನ್ನು ದೂರ ತಳ್ಳುತ್ತಾರೆ. ಕನಿಷ್ಠ ಪಕ್ಷ ಮನೆಯಲ್ಲಿ ಇರಿಸಿ ಆರೈಕೆ ಮಾಡುತ್ತಾರ? ಅದೂ ಇಲ್ಲ. ಯಾರೋ ಏನು ಎಂಬಂತೆ ಮನೆಯಿಂದಲೇ ಹೊರ ತಳ್ಳುತ್ತಾರೆ. ಇಂತಹ ಘಟನೆಗಳು ಒಂದೋ ಎರಡೋ, ಪ್ರತೀ ಬಾರಿ ನಡೆಯುತ್ತಲೇ ಇರುತ್ತದೆ.
ಇದೀಗ ಅಂತಹುದೇ ಒಂದು ಹೃದಯವಿದ್ರಾಯಕ ಘಟನೆ ನಡೆದಿದೆ. ಹೆತ್ತಬ್ಬೆಯನ್ನು ನೀಚ ಮಗನೋರ್ವ ದೇವಸ್ಥಾನದಲ್ಲಿ ಬಿಟ್ಟು ಹೋಗಿದ್ದಾನೆ. ಆದ್ರೆ, ಆಕೆ ಮಾತ್ರ ನನ್ನ ಮಗ ಈಗ ಬರುತ್ತಾನೆ, ಮತ್ತೆ ಬರುತ್ತಾನೆ ಎಂದು ದಾರಿ ಕಾಯುತ್ತಲೇ ಕುಳಿತಿದ್ದಾಳೆ. ಇಂಥದ್ದೊಂದು ಹೃದಯ ಕಲ್ಲಾಗಿಸುವ ಘಟನೆ ಕೊಪ್ಪಳ ಜಿಲ್ಲೆಯ ಹುಲಗಿ ಗ್ರಾಮದ ಹುಲಿಗೆಮ್ಮ ದೇಗುಲದಲ್ಲಿ ನಡೆದಿದೆ.
ಕಾಸೀಂಬಿ ಎಂಬ 80 ವರ್ಷ ವಯಸ್ಸಿನ ವೃದ್ಧೆಯನ್ನು ಕಳೆದ ಎರಡು ದಿನಗಳ ಹಿಂದೆ ಮಗ ದೇವಸ್ಥಾನದಲ್ಲಿ ಬಿಟ್ಟು ಹೋಗಿದ್ದಾನೆ. ಈಕೆಗೆ ತಾನು ಎಲ್ಲಿಂದ ಬಂದೆ, ತನ್ನ ಮನೆ ಎಲ್ಲಿದೆ, ಮಗ ಎಲ್ಲಿ ಹೋದ ಎನ್ನುವ ಬಗ್ಗೆ ಏನೂ ಗೊತ್ತಿಲ್ಲ. ಇನ್ನು ಈಕೆ ತನ್ನ ಊರು ಉಜ್ಜಯಿನಿ, ತನ್ನ ಹೆಸರು ಕಾಸೀಂಬಿ ಅಂತ ಹೇಳಿಕೊಳ್ಳುತ್ತಾಳೆ.
ಎರಡು ದಿನದ ಹಿಂದೆ ಈಕೆಯ ಮಗ ಹುಲಗೆಮ್ಮದೇವಿ ದೇವಸ್ಥಾನಕ್ಕೆ ಈಕೆಯನ್ನು ಕರೆ ತಂದು, ಸಿಮ್ ಇಲ್ಲದ ಖಾಲಿ ಮೊಬೈಲ್ ಹಾಗೂ ತನ್ನ ಮೊಬೈಲ್ ನಂಬರ್ ಇದೆ ಎಂದು ಖಾಲಿ ಹಾಳೆ ನೀಡಿ ಹೊರಟು ಹೋಗಿದ್ದಾನೆ. ಈಗ ಬರುತ್ತೇನೆ ಅಂತ ಹೇಳಿದ್ದ ಮಗ ಎಷ್ಟು ಹೊತ್ತಾದ್ರೂ ಬರದೇ ಇದ್ದಾಗ ವೃದ್ಧ ತಾಯಿ ಗಾಬರಿಯಾಗಿದ್ದಾಳೆ. ತನ್ನ ಮಗನಿಗಾಗಿ ಕಾದು ಕಾದು ಸುಸ್ತಾಗಿದ್ದಾಳೆ.
ಆದರೆ, ರಾತ್ರಿಯಾದರೂ ಅಜ್ಜಿ ಬಳಿಗೆ ಮಗ ಬರಲೇ ಇಲ್ಲ. ಒಬ್ಬಂಟಿಯಾಗಿದ್ದ ಅಜ್ಜಿಯನ್ನು ಕಂಡು ಸ್ಥಳೀಯರು ತಿನ್ನಲು ಆಹಾರ ನೀಡಿದ್ದಾರೆ. ಮಲಗಲು ಹಾಸಿಗೆ, ದಿಂಬು ನೀಡಿದ್ದಾರೆ. ಬಳಿಕ ಮೊಬೈಲ್ ಪರಿಶೀಲಿಸಿದಾಗ ಸಿಮ್ ಕಾರ್ಡ್ ಇಲ್ಲದಿರುವುದು ಬೆಳಕಿಗೆ ಬಂದಿದೆ. ಮಗನ ಮೊಬೈಲ್ ನಂಬರ್ ಅಂತ ಕೊಟ್ಟಾಗ, ಅದು ಖಾಲಿ ಹಾಳೆ, ಅದರಲ್ಲಿ ನಂಬರ್ ಬರೆದಿಲ್ಲ ಎನ್ನುವುದು ಬೆಳಕಿಗೆ ಬಂದಿದೆ.
ಈ ವೇಳೆ ವೃದ್ಧೆಯನ್ನು ಮಗ ದೇವಸ್ಥಾನದಲ್ಲಿ ಬಿಟ್ಟು ಹೋಗಿರುವ ವಿಚಾರ ಸ್ಥಳೀಯರಿಗೆ ಗೊತ್ತಾಗಿದೆ. ಕೂಡಲೇ ಸ್ಥಳೀಯರು ಹಿರಿಯ ನಾಗರಿಕ ಇಲಾಖೆ ಸಿಬ್ಬಂದಿಗೆ ವಿಚಾರ ತಿಳಿಸಿದ್ದಾರೆ. ಕೂಡಲೇ ಹಿರಿಯ ನಾಗರಿಕರ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಬಳಿಕ ಸ್ಥಳಕ್ಕೆ ಬಂದ ಹಿರಿಯ ನಾಗರಿಕರ ಇಲಾಖೆ ಸಿಬ್ಬಂದಿ, ಅಜ್ಜಿಯ ವಿಚಾರಣೆ ನಡೆಸಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ. ಕೊನೆಗೂ ಅಜ್ಜಿ ಮಾತ್ರ ಮಗನ ದಾರಿ ಕಾಯುತ್ತಲೇ ವೃದ್ಧಾಶ್ರಮದ ದಾರಿ ಹಿಡಿಯುವಂತೆ ಆಯಿತು..