

ತಿಗಣೆ ಕಾಟ ಜಾಸ್ತಿ ಎಂದು ಮನೆಗೆ ಸಿಂಪಡಿಸಿದ್ದ ತಿಗಣೆ ಕ್ರಿಮಿನಾಶಕದ ವಾಸನೆ ಬಾಲಕಿಯೋರ್ವಳ ಪ್ರಾಣವನ್ನೇ ಕಸಿದುಕೊಂಡ ಹೃದಯವಿದ್ರಾವಕ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಉಸಿರಾಟದಲ್ಲಿ ತೊಂದರೆ ಉಂಟಾಗಿ ಬಾಲಕಿಯೊಬ್ಬಳು ಮೃತಪಟ್ಟು, ಬಾಲಕಿಯ ತಂದೆ ತಾಯಿ ತೀವ್ರ ಅಸ್ವಸ್ಥರಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಬೆಂಗಳೂರಿನ ವಸಂತ ನಗರ 8ನೇ ‘ಬಿ’ ಕ್ರಾಸ್ ನಿವಾಸಿ ಅಹನಾ (8) ಮೃತ ದುರ್ದೈವಿ. ಖಾಸಗಿ ಆಸ್ಪತ್ರೆಯಲ್ಲಿ ಮೃತ ಬಾಲಕಿಯ ತಂದೆ ವಿನೋದ್ ಕುಮಾರ್ ಹಾಗೂ ನಿಷಾ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಮನೆಯಲ್ಲಿ ತಿಗಣೆ ಕಾಟ ಹೆಚ್ಚಾದ್ದರಿಂದ ಬೇಸತ್ತ ಮನೆ ಮಾಲಿಕರು, ಮನೆ ಕಟ್ಟಡಕ್ಕೆ ತಿಗಣೆ ಕ್ರಿಮಿನಾಶಕ ಸಿಂಪಡಣೆ ನಿರ್ಧಾರ ಮಾಡಿದ್ದರು. ಇದಕ್ಕಾಗಿ ವಿನೋದ್ ಸೇರಿದಂತೆ ತಮ್ಮ ನಾಲ್ವರು ಬಾಡಿಗೆದಾರರಿಗೆ ಒಂದು ವಾರದ ಮಟ್ಟಿಗೆ ಮನೆ ಖಾಲಿ ಮಾಡುವಂತೆ ಅವರು ಸೂಚಿಸಿದ್ದರು. ಅಂತೆಯೇ ನಾಲ್ಕು ದಿನಗಳ ಹಿಂದೆ ತಮ್ಮೂರಿಗೆ ತೆರಳಿದ್ದ ವಿನೋದ್, ಸೋಮವಾರ ಮುಂಜಾನೆ ನಗರಕ್ಕೆ ಮರಳಿದ್ದರು. ಮನೆ ಮಾಲಿಕರಿಗೆ ಮಾಹಿತಿ ನೀಡದೆ ತಮ್ಮಲ್ಲಿದ್ದ ಇನ್ನೊಂದು ಕೀ ಬಳಸಿ ಮನೆ ಬೀಗ ತೆರೆದು ಅವರು ಒಳ ಹೋಗಿದ್ದರು. ಮುಂಜಾನೆ ಬಸ್ಸಿನಲ್ಲಿ ಬಂದು ಆಯಾಸಗೊಂಡಿದ್ದ ವಿನೋದ್ ಕುಟುಂಬ, ಮನೆಯಲ್ಲಿ ಟೀ ಕುಡಿದು ವಿಶ್ರಾಂತಿ ಮಾಡಿದ್ದರು.
ಕೆಲ ಹೊತ್ತಿನ ಬಳಿಕ ಎದ್ದು ಮನೆ ಸ್ವಚ್ಛತೆಯಲ್ಲಿ ತೊಡಗಿದ್ದರು. ಆಗ ಕ್ರಿಮಿನಾಶಕ ದುರ್ವಾಸನೆಗೆ ಅವರು ವಾಂತಿಯಾಗಿ ಅಸ್ವಸ್ಥರಾಗಿದ್ದಾರೆ. ಈ ವೇಳೆ ಅಹನಾ ನಿತ್ರಾಣಳಾಗಿ ಅರೆಪ್ರಜ್ಞೆಗೊಂಡಿದ್ದಾಳೆ. ಕೂಡಲೇ ಆಕೆಯನ್ನು ಸಮೀಪದ ಮಹಾವೀರ್ ಜೈನ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಬಾಲಕಿ ಅಸುನೀಗಿದ್ದಾಳೆ. ಕೇರಳ ಮೂಲದ ವಿನೋದ್, ನಗರದಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಖಾಸಗಿ ಶಾಲೆಯಲ್ಲಿ ಅಹನಾ ಮೂರನೇ ತರಗತಿ ಓದುತ್ತಿದ್ದಳು. ಎಂಟು ವರ್ಷಗಳಿಂದ ವಸಂತನಗರದ ಬಿ ಕ್ರಾಸ್‌ನಲ್ಲಿ ಎಸ್.ಶಿವಪ್ರಸಾದ್ ಅವರ ಮನೆಯಲ್ಲಿ ವಿನೋದ್ ಕುಟುಂಬ ವಾಸವಾಗಿದ್ದರು. ಇದೇ ಕಟ್ಟಡದ ನೆಲಮಹಡಿಯಲ್ಲಿ ಮನೆ ಮಾಲಿಕರು ನೆಲೆಸಿದ್ದಾರೆ.
ಆಕೆಯ ಪೋಷಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಬಂಧ ನಿರ್ಲಕ್ಷ್ಯತನ ಆರೋಪದಡಿ ಕಟ್ಟಡದ ಮಾಲಿಕ ಶಿವಪ್ರಸಾದ್ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.













