ಅಜ್ಜಂದಿರು ಬಳಸುವ ಪಟ್ಟಾಪಟ್ಟಿ ಚಡ್ಡಿಯ ಬೆಲೆ ಇಂಟರ್ನೆಟ್ ನಲ್ಲಿ ಕೇವಲ 15,450 ರೂಪಾಯಿ !ಹಾಗೇ,ಅಮೆಜಾನ್‌ನಲ್ಲಿ ಪ್ಲಾಸ್ಟಿಕ್ ಬಕೆಟ್ ರೇಟ್ ಎಷ್ಟು ಎಂದು ತಿಳಿದ್ರೆ ಬೆಚ್ಚಿ ಬೀಳ್ತಿರಾ !
ಸಾಮಾನ್ಯವಾಗಿ ಹಳ್ಳಿಯ ಕಡೆ ಅಜ್ಜಂದಿರು ಹಾಕುವ ಪಟ್ಟಾಪಟ್ಟಿ ಚಡ್ಡಿಯ ದರ ಎಷ್ಟಿರಬಹುದು? ಬಹುಶ: ಅತ್ಯಂತ ಚೀಪಾಗಿ ಸಸ್ತಾ ಬಟ್ಟೆ ಅಂದರೆ ಅದೇ ಇರಬಹುದೇನೋ ?ಹೆಚ್ಚೆಂದರೆ 100 ರಿಂದ 200 ರೂಪಾಯಿಗಳು. ಆದರೆ ಆನ್‌ಲೈನ್‌ನಲ್ಲಿ ಅದಕ್ಕೆ 15,450 ರೂಪಾಯಿ ದರ ನಿಗದಿಪಡಿಸಲಾಗಿದೆ. ಇದನ್ನು ನೋಡಿ ಅಂತಹ ಚಡ್ಡಿ ಬಳಸುವ ಜನರ ಚಡ್ಡಿ ಶಾಕ್ ಗೆ ಶೇಕ್ ಆಗಿರುವುದಂತೂ ತಮಾಷೆ ಮಾತ್ರ ಆಗಿರಲಿಕ್ಕಿಲ್ಲ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಭಾರಿ ಟ್ರೋಲ್ ಆಗ್ತಿದೆ. ಅರ್ಷದ್ ವಹೀದ್ ಎಂಬುವವರು ಟ್ವಿಟ್ಟರ್‌ನಲ್ಲಿ ಇದರ ಸ್ಕ್ರೀನ್‌ಶಾಟ್‌ನ್ನು ಹಂಚಿಕೊಂಡಿದ್ದು ಇದಕ್ಕೆ ಇಷ್ಟೊಂದು ಬೆಲೆ ಏಕೆ ಎಂದು ಪ್ರಶ್ನಿಸಿದ್ದಾರೆ. ಈಗ ಇಂಟರ್ನೆಟ್ಟಿನಲ್ಲಿ ಅಜ್ಜನ ಚಡ್ಡಿಯದೇ ಝಳ ಝಳ ಸಂಚಲನ !
ಆನ್‌ಲೈನ್‌ನ ಈ ಚಡ್ಡಿಗಳಲ್ಲಿ ಚಿನ್ನ ಬಣ್ಣದ ಚಿತ್ತಾರ, ತಳಿರು ತೋರಣ-ಒಪ್ಪ ಓರಣಗಳೇನೂ ಇಲ್ಲ. ಆದಾಗ್ಯೂ ಏಕೆ ಸಾಮಾನ್ಯ ದೈನಂದಿನ ಉಡುಗೆಗಳಂತೆ ಕಾಣುವ ಇವುಗಳಲ್ಲಿ ಅಂತಹ ವಿಶೇಷತೆಗಳೇನೂ ಕಾಣ ಸಿಗುತ್ತಿಲ್ಲ. ಆದರೆ ಬೆಲೆ ಮಾತ್ರ ತಲೆ ತಿರುಗುವಂತೆ ಮಾಡುತ್ತಿದೆ. ಇಲ್ಲಿ ಹಾಕಿರುವ ಫೋಟೋದಲ್ಲಿ ಕಾಣಿಸುವ ಚಡ್ಡಿ ಮೇಲೆ ನೀಲಿ ಮತ್ತು ಹಸಿರು ಪಟ್ಟೆಗಳು ಕೆಂಪು ಬಣ್ಣದ ಗೆರೆಗಳನ್ನು ಹೊಂದಿದೆ ಮತ್ತು ಶರ್ಟ್ ಮೇಲೆ ಚೆಕ್ಕರ್ ಪ್ರಿಂಟ್ ಇದೆ. ಅಲ್ಲದೆ, ಇದು ಅದೇ ಹಸಿರು ಚೆಕ್ಕರ್ ಪ್ರಿಂಟ್ ಶಾರ್ಟ್ಸ್‌ನೊಂದಿಗೂ ಲಭ್ಯವಿದೆ. ಈ ಫೋಟೋವನ್ನು ಹಂಚಿಕೊಂಡಾಗಿನಿಂದ ಸಖತ್ ಟ್ರೋಲ್ ಆಗುತ್ತಿವೆ.
ಪ್ಯಾಟೆ ಹುಡುಗರು ಸ್ಟೈಲ್ ಸ್ಟೈಲ್ ಆದ ಫ್ಯಾಷನೇಬಲ್ ಚಡ್ಡಿಗಳನ್ನು ಹಾಕಿಕೊಂಡು ತಿರುಗಾಡಿದರೆ, ಹಳ್ಳಿಯ ಕಡೆಗಳಲ್ಲಿ ವಯಸ್ಸಾದವರು ವಂಶಪಾರಂಪರ್ಯವಾಗಿ ಬಳುವಳಿಯಾಗಿ ಬಂದ ಇಂತಹ ಪಟ್ಟಾಪಟ್ಟಿ ಚಡ್ಡಿಗಳನ್ನು ಹಾಕಿಕೊಂಡು ತಮ್ಮದೇ ಟ್ರೆಡ್ಮಾರ್ಕ್ ಎಂಬಂತೆ ತಿರುಗಾಡುತ್ತಿರುತ್ತಾರೆ. ಆದರೆ ಇವರು ತಮ್ಮ ಚಡ್ಡಿಗೆ ಇಷ್ಟೊಂದು ಬೆಲೆ ಇದೆಯೇ ಎಂದು ತಿಳಿದರೆ, ಒಗೆದು ಹಿತ್ತಲಲ್ಲಿ ಒಣಹಾಕಿದ ಚಡ್ಡಿಗಳನ್ನು ಸೀದಾ ಒಳಮನೆಗೆ ತಂದು ಭದ್ರವಾಗಿಡುವುದು ಪಕ್ಕಾ!
ಪ್ಲಾಸ್ಟಿಕ್ ಬಕೆಟ್‌ಗೆ ಕೇವಲ 25 ಸಾವಿರ !!
ಇದೇ ರೀತಿ ಕೆಲ ದಿನಗಳ ಹಿಂದೆ ಅಮೆಜಾನ್‌ನಲ್ಲಿ ಸಾಮಾನ್ಯ ಪ್ಲಾಸ್ಟಿಕ್ ಬಕೆಟ್‌ವೊಂದಕ್ಕೆ ಬರೋಬ್ಬರಿ 25,999 ರೂಪಾಯಿ ಬೆಲೆ ನಿಗದಿಪಡಿಸುವ ಮೂಲಕ ಇದೇ ರೀತಿ ಚರ್ಚೆಗೆ ಗ್ರಾಸವಾಗಿತ್ತು. ಅಮೇಜಾನ್ ವೆಬ್ ಸೈಟ್ ನಲ್ಲಿ ವ್ಯಕ್ತಿಯೊಬ್ಬರು ಹೀಗೆ ಸರ್ಚ್ ಮಾಡುತ್ತಿದ್ದಾಗ ಪ್ಲಾಸ್ಟಿಕ್ ಬಕೆಟ್ ಹಾಗೂ ಪ್ಲಾಸ್ಟಿಕ್ ಮಗ್ ಕಂಡಿವೆ. ಅವುಗಳ ರೇಟ್ ಕಂಡು ಜನರು ಹೌಹಾರಿದ್ದಾರೆ. ಪ್ಲಾಸ್ಟಿಕ್ ಬಕೆಟ್ ಫಾರ್ ಹೋಮ್ ಅಂಡ್ ಬಾತ್‌ರೂಮ್ ಸೆಟ್ ಆಫ್ 1 ಎಂಬ ಶೀರ್ಷಿಕೆಯ ಐಟಂ ಅನ್ನು ಅಮೇಜಾನ್ ನಲ್ಲಿ ದಾಖಲೆಯ ₹ 25,999 ಗೆ ಮಾರಾಟಕ್ಕೆ ಇಡಲಾಗಿತ್ತು. ಇನ್ನೂ ವಿಚಿತ್ರವಾದ ಸಂಗತಿಯೆಂದರೆ, ಈ ಬಕೆಟ್ ನ ಮೂಲ ಬೆಲೆ 35, 990 ರೂಪಾಯಿ. ಗ್ರಾಹಕರಿಗೆ ಶೇ. 28ರ ರಿಯಾಯಿತಿಯಲ್ಲಿ 25,999 ರೂಪಾಯಿಗೆ ತೀರಾ ಅಗ್ಗವಾಗಿ ಸಿಗುತ್ತಿದೆ. ಬಹುಶ: ಅಜ್ಜನ ಅಷ್ಟು ರೇಟಿನ ಚಡ್ಡಿ ತೊಳೆಯಲು ಅಗ್ಗದ ಪ್ಲಾಸ್ಟಿಕ್ ಬಕೆಟ್ ಬಳಸಿದರೆ ಚಡ್ಡಿಯ ಗೌರವ ಕಮ್ಮಿ ಆಗಲ್ವೆ ? ಅದಕ್ಕೆ ಇರಬೇಕು ಬಕೆಟ್ ರೇಟಿನಲ್ಲಿ ಈ ಹೈಟು !
ಈ ಫೋಟೋವನ್ನು @vivekraju93 ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಅಮೆಜಾನ್‌ನಲ್ಲಿ ಇದನ್ನು ಈಗ ತಾನೆ ನೋಡಿದೆ ಮತ್ತು ನನಗೆ ಏನು ಮಾಡಬೇಕೆಂದು ತೋಚುತ್ತಿಲ್ಲ’ ಎಂದು ಬರೆದುಕೊಂಡಿದ್ದಾರೆ. ಇನ್ನು @shubhi1011 ಎನ್ನುವ ಟ್ವಿಟರ್ ಬಳಕೆದಾರರು, ಚಿತ್ರವನ್ನು ಹಂಚಿಕೊಂಡಿದ್ದು, ಅಚ್ಚರಿಯ ಸಂಗತಿ ಏನೆಂದರೆ, ಕೇವಲ 1 ಬಕೆಟ್ ಮಾತ್ರವೇ ಸ್ಟಾಕ್ ನಲ್ಲಿ ಇದೆ ಎಂದು ಬರೆದುಕೊಂಡಿದ್ದರು. ಬಹುಶ: 1 ಬಕೆಟ್ ಸ್ಟಾಕ್ ಕಮ್ಮಿ ಆಗಲಾರದು ಅನ್ನಿಸುತ್ತೆ !