Breaking News | ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಪ್ರಮುಖ ಆರೋಪಿ ಬೆಳ್ಳಾರೆ ನಿವಾಸಿ ಬಂಧನ?

ಮಂಗಳೂರು: ಬೆಳ್ಳಾರೆ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯ ಬಂಧನವಾಗಿದೆ ಎಂದು ಹೇಳಲಾಗುತ್ತಿದೆ. ಮುಖ್ಯ ಆರೋಪಿ ಸ್ಥಳೀಯ ಎನ್ನಲಾಗಿದೆ. ನಿನ್ನೆಯವರೆಗೆ ಒಟ್ಟು15 ಜನರನ್ನು ಈ ಮರ್ಡರ್ ಕೇಸಿನ ಸಂಬಂಧ ಬಂಧಿಸಲಾಗಿತ್ತು. ಪೊಲೀಸರು ಹಲವು ತಂಡಗಳಲ್ಲಿ ಆರೋಪಿಗಳ ವಿಚಾರಣೆ ಮತ್ತು ಫೀಲ್ಡ್ ತನಿಖೆ ನಡೆಸುತ್ತಿದ್ದಾರೆ. ಪೋಲೀಸರ ಅಧಿಕೃತ ಪ್ರಕಟಣೆ ಇನ್ನೂ ಆಗಿಲ್ಲ.

 

ಮುಖ್ಯಆರೋಪಿಯನ್ನು ಈಗ ಬಂಧಿಸಲಾಗಿದ್ದು, ಆರೋಪಿಯು ಬೆಳ್ಳಾರೆಯ ನಿವಾಸಿಯಾಗಿದ್ದು, ವಿಚಾರಣೆ ವೇಳೆ ಕೊಲೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಮುಖ್ಯಆರೋಪಿಯು ಬೆಳ್ಳಾರೆಯ ಬೂಡು ಪ್ರದೇಶದ ನಿವಾಸಿ ಎಂಬ ಸ್ಪೋಟಕ ಮಾಹಿತಿ ಈಗ ಲಭ್ಯ ಆಗುತ್ತಿದೆ. ಈ ಬಗ್ಗೆ ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ಮಹತ್ವದ ಮಾಹಿತಿ ಪ್ರಕಟಿಸಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ಸ್ಥಳೀಯರೇ ಅಥವಾ ಕೇರಳದ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆಯೇ ಎಂಬ ಬಗ್ಗೆ ಹಲವು ಅನುಮಾನಗಳಿದ್ದವು, ಈಗ ಮಾಹಿತಿಗಳು ಒಂದೊಂದಾಗಿ ಹೊರಬರುತ್ತಿವೆ.

ಕೊಲೆ ನಡೆದ ನಂತರ ಬರುವ ಸಹಜ ಕುತೂಹಲದಲ್ಲಿ ಜನರಿದ್ದಾರೆ. ಹತ್ಯೆಗೆ ಒಂದು ಕಾರಣ- ಅದು ಕ್ಷುಲ್ಲಕವಾದರೂ ಇದ್ದೇ ಇರುತ್ತಲ್ಲ, ಅದನ್ನು ತಿಳಿದುಕೊಳ್ಳುವ ಕುತೂಹಲ ಇಂತಹಾ ಕ್ರೈಮ್ ಪ್ರಕರಣಗಳಲ್ಲಿ ಜನರಲ್ಲಿ ಇರುತ್ತದೆ. ಹಾಗೆಯೇ ಜನರು ಆತಂಕಿತರಾಗಿದ್ದರೂ, ಅದನ್ನು ತಿಳಿದುಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ. ನಿನ್ನೆ ಎಡಿಜಿಪಿ ಅಲೋಕ್ ಕುಮಾರ್ ಅವರು ಸುದ್ದಿ ಗೋಷ್ಠಿ ನಡೆಸಿ, 2-3 ಕಾರಣಗಳಿಂದ ಹತ್ಯೆಗೆ ಕಾರಣ ಇರಬಹುದು ಎಂದಿದ್ದರು. ಹತ್ಯೆ ಯಾಕಾಯಿತು ಎನ್ನುವ ಕುತೂಹಲ ಈಗ ಜನರಲ್ಲಿ ಮತ್ತು ಕುಟುಂಬಸ್ಥರಲ್ಲಿ ಇದೆ. ಮುಖ್ಯ ಆರೋಪಿಯ ಹೆಸರು ಪರಿಚಯದ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಒಂದು ಹಂತದ ತನಿಖೆಯ ನಂತರವಷ್ಟೇ ಪೊಲೀಸರಿಂದ ಈ ಮಾಹಿತಿ ದೊರೆಯುವ ಸಾಧ್ಯತೆ.

ಘಟನೆ ಹಿನ್ನೆಲೆ:

ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿರುವ ಅಕ್ಷಯ ಚಿಕನ್ ಸೆಂಟರ್ ಮಾಲಕ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಎಂಬವರ ಮೇಲೆ ದುಷ್ಕರ್ಮಿಗಳಿಬ್ಬರು ಕತ್ತಿಯಿಂದ ಕಡಿದ ಪರಿಣಾಮ ತೀವ್ರ ಗಾಯಗೊಂಡಿರುವ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆತರುತ್ತಿದ್ದ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಜು.26ರಂದು ರಾತ್ರಿ 8.20 ರಿಂದ 8.45ರ ನಡುವೆ ಈ ಘಟನೆ ನಡೆದಿದೆ.ಪ್ರವೀಣ್‌ರವರು ತನ್ನ ಅಂಗಡಿಯಲ್ಲಿ ಕುಳಿತುಕೊಂಡಿದ್ದ ವೇಳೆ ಕೆಎಲ್ ನಂಬರಿನ ಬೈಕ್‌ನಲ್ಲಿ ಬಂದಿದ್ದ ಈರ್ವರು ದುಷ್ಕರ್ಮಿಗಳು ಅಲ್ಲಿಗೆ ಬಂದಿದ್ದರು.ಇದನ್ನು ಗಮನಿಸಿದ ಪ್ರವೀಣ್‌ರವರು ತಪ್ಪಿಸಿಕೊಳ್ಳಲೆಂದು ಪಕ್ಕದ ಅಂಗಡಿಗೆ ಹೋಗುತ್ತಿದ್ದ ವೇಳೆಯೇ ಹಿಂದಿನಿಂದ ಬಂದು ಅವರ ತಲೆಗೆ ತಲವಾರಿನಿಂದ ಕಡಿದು ಪರಾರಿಯಾಗಿದ್ದಾರೆ.

ಇದರಿಂದಾಗಿ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರವೀಣ್‌ರವರನ್ನು ಕೂಡಲೇ ಅಲ್ಲಿಂದ ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆಂದು ಕರೆ ತರುತ್ತಿದ್ದ ವೇಳೆ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಈ ಘಟನೆ ಯಾಕಾಗಿ ನಡೆಯಿತು ಎಂಬುದು ನಿಗೂಢವಾಗಿದೆಯಾದರೂ ಕೆಲ ದಿನಗಳ ಹಿಂದೆ ಕಳೆಂಜ ವಿಷ್ಣುನಗರದಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ಈ ಕೃತ್ಯ ಎಸಗಲಾಗಿದೆ ಎಂದು ಸುದ್ದಿ ಹರಡಿದೆ. ಘಟನೆಯಿಂದಾಗಿ ಬೆಳ್ಳಾರೆಯಲ್ಲಿ ತುಸು ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಈಗಾಗಲೇ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

Leave A Reply

Your email address will not be published.