ದೇಶದ 16ನೇ ರಾಷ್ಟ್ರಪತಿ ಆಯ್ಕೆಗೆ ಮತದಾನ ಪ್ರಾರಂಭ

ಬೆಂಗಳೂರು: ದೇಶದ 16 ನೇ ನೂತನ ರಾಷ್ಟ್ರಪತಿಯವರ ಆಯ್ಕೆಗೆ ಇಂದು ಮತದಾನ ಆರಂಭವಾಗಿದ್ದು, ವಿಧಾನಸಭೆಯ ಮೊದಲ ಮಹಡಿಯಲ್ಲಿ ರಾಜ್ಯದ ಶಾಸಕರು ಮತ್ತು ಕೆಲವು ಸಂಸತ್ ಸದಸ್ಯರು ಮತದಾನ ಮಾಡಿದ್ದಾರೆ.

 

ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿಯಾಗಿ ದೌಪ್ರದಿ ಮುರ್ಮು ಸ್ಪರ್ಧಿಸುತ್ತಿದ್ದಾರೆ ಮತ್ತು ಯಶ್ವಂತ್ ಸಿನ್ಹಾ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.

ಸಂಸತ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಡಾ.ಮನ್ ಮೋಹನ್ ಸಿಂಗ್, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್, ಸಂಸದ ಶಿವಕುಮಾರ್ ಉದಾಸಿ ಸೇರಿದಂತೆ ಹಲವು ಮಂದಿ ಮತ ಚಲಾಯಿಸಿದರು.

ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಲಖನೌ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಮಿಳುನಾಡಿನಲ್ಲಿ ಸಿಎಂ ಎಂ. ಕೆ. ಸ್ಟಾಲಿನ್, ಆಂಧ್ರ ಪ್ರದೇಶದಲ್ಲಿ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ, ಉತ್ತರ ಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತಿತರರು ಮತದಾನ ಮಾಡಿದರು. ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ ಮತ್ತಿತರರು ಮತ ಚಲಾಯಿಸಿದರು.

ಈ ಮತದಾನದಲ್ಲಿ ಲೋಕಸಭೆಯ ಸದಸ್ಯರು, ರಾಜ್ಯ ಸಭೆ ಸದಸ್ಯರು ಮತ್ತು ಶಾಸಕರು ರಾಷ್ಟ್ರಪತಿ ಚುನಾವಣೆಗೆ ಮತದಾನದ ಹಕ್ಕು ಹೊಂದಿದ್ದಾರೆ. ನಮ್ಮ ದೇಶದಲ್ಲಿ 4033 ಶಾಸಕರು ಮತದಾನಕ್ಕೆ ಅರ್ಹರಾಗಿದ್ದಾರೆ. ಸಂಜೆ 5 ಗಂಟೆ ತನಕ ಮತದಾನಕ್ಕೆ ಅವಕಾಶ ಇದೆ ಎಂದು ಹೇಳಲಾಗಿದೆ.

ಇಂದು ರಾತ್ರಿ 9.45 ರ ವಿಮಾನದಲ್ಲಿ ಮತದಾನದ ಪೆಟ್ಟಿಗೆಗಳನ್ನು ಬೆಂಗಳೂರಿನಿಂದ ಕೊಂಡೊಯ್ಯಲಾಗುವುದು. ಅದೇ ರೀತಿ ಎಲ್ಲ ರಾಜ್ಯಗಳ ರಾಜಧಾನಿಗಳಿಂದ ಮತದಾನದ ಪೆಟ್ಟಿಗೆಗಳು ರಾತ್ರಿ ದೆಹಲಿಯನ್ನು ತಲುಪಲಿವೆ.

Leave A Reply

Your email address will not be published.