ಡೋಲೋ ತಯಾರಕರ ಮೇಲೆ ಐಟಿ ದಾಳಿ| ಐಟಿ ಅಧಿಕಾರಿಗಳಿಂದ ಶಾಕಿಂಗ್ ಮಾಹಿತಿ ಬಿಡುಗಡೆ
‘ಡೋಲೊ 650’ ಮಾತ್ರೆ ಉತ್ಪಾದಿಸುವ ಬೆಂಗಳೂರು ಮೂಲದ ಔಷಧ ಕಂಪನಿ ಮೈಕ್ರೋ ಲ್ಯಾಬ್ ಲಿಮಿಟೆಡ್ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ 1.20 ಕೋಟಿ ರೂ. ಅಕ್ರಮ ನಗದು ಮತ್ತು 1.40 ಕೋಟಿ ರೂ. ಮೌಲ್ಯದ ಚಿನ್ನ-ವಜ್ರಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಇಲಾಖೆ ಬುಧವಾರ ತಿಳಿಸಿದೆ.
ಮೈಕ್ರೋ ಲ್ಯಾಬ್‌ನ ಕಚೇರಿಗಳು, ಕಂಪನಿಯ ಸಿಎಂಡಿ ಮತ್ತು ನಿರ್ದೇಶಕರು ಸೇರಿದಂತೆ ಆಡಳಿತ ಮಂಡಳಿಯ ಉನ್ನತ ಅಧಿಕಾರಿಗಳೂ ದಾಳಿಗೆ ಗುರಿಯಾಗಿದ್ದರು.
ಜು. 6ರಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ತಂಡ ಮೈಕ್ರೋ ಲ್ಯಾಬ್‌ಗೆ ಸೇರಿದ 9 ರಾಜ್ಯಗಳ 36 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಿತ್ತು. ದಿಲೀಪ್ ಸುರಾನಾ ಜನಪ್ರಿಯ ಡೋಲೋ ಮಾತ್ರೆಗಳನ್ನು ತಯಾರಿಸುವ ಬೆಂಗಳೂರಿನ ಮೈಕ್ರೋ ಲ್ಯಾಬ್‌ನ ಸಿಎಂಡಿಯಾಗಿದ್ದು, ಅವರೂ ದಾಳಿಗೆ ಗುರಿಯಾಗಿದ್ದರು.
“ವೈದ್ಯರಿಗೆ ತಮ್ಮ ಉತ್ಪನ್ನದ ಮಾರಾಟ ಮತ್ತು ಪ್ರಚಾರಕ್ಕಾಗಿ ಈ ಔಷಧ ಕಂಪನಿಯು ಉಡುಗೊರೆಗಳನ್ನು ನೀಡಿದೆ. ತನ್ನ ಬ್ರ್ಯಾಂಡ್ ಮತ್ತು ಉತ್ಪನ್ನಗಳ ಪ್ರಚಾರಕ್ಕೆ ಮೌಲ್ಯ ವಿರೋಧಿ ಪದ್ಧತಿಗಳನ್ನು ಅನುಸರಿಸಿದೆ. ಸುಮಾರು 1,000 ಕೋಟಿ ರೂ. ಮೌಲ್ಯದ ಉಡುಗೊರೆಗಳನ್ನು ನೀಡಿದೆ. ನಾನಾ ರೂಪದಲ್ಲಿ ಸುಮಾರು 300 ಕೋಟಿ ರೂ. ತೆರಿಗೆ ವಂಚನೆ ನಡೆಸಿದೆ,” ಎಂದು ಇಲಾಖೆ ಅಂದಾಜು ಮಾಡಿದೆ.
ಮೈಕ್ರೋ ಲ್ಯಾಬ್ ಜನಪ್ರಿಯ ಡೋಲೋ-650 ಮಾತ್ರೆಗಳನ್ನು ತಯಾರಿಸುತ್ತಿದ್ದು, ಜ್ವರ ಹಾಗೂ ಇತರ ಸಣ್ಣ ಪುಟ್ಟ ಖಾಯಿಲೆಗಳನ್ನು ನಿರ್ವಹಿಸಲು ಈ ಮಾತ್ರೆಯು ಹೆಸರುವಾಸಿಯಾಗಿದೆ. ಕೋವಿಡ್-19 ಸಂದರ್ಭದಲ್ಲಿ ಕಂಪನಿಯ ‘ಡೋಲೊ 650’ಗೆ ಉತ್ತಮ ಬೇಡಿಕೆ ಬಂದಿತ್ತು. ‘ಪ್ಯಾರಾಸೆಟಮೋಲ್’ ಮಾತ್ರೆಗೆ ಅನ್ವರ್ಥ ನಾಮ ಎಂಬಂತೆ ಗುರುತಿಸಿಕೊಂಡು ಈ ವಲಯದಲ್ಲಿ ಮಾರುಕಟ್ಟೆಯ ನಾಯಕನಾಗಿ ಮೆರೆದಿತ್ತು.
ಪರಿಣಾಮ ಈ ಅವಧಿಯಲ್ಲಿ ಕಂಡು ಕೇಳರಿಯದ ಮಾರಾಟಕ್ಕೆ ‘ಡೋಲೋ 650’ ಮಾತ್ರೆ ಸಾಕ್ಷಿಯಾಗಿತ್ತು. ಪರಿಣಾಮ ನೂರಾರು ಕೋಟಿ ರೂ. ಆದಾಯವೂ ಕಂಪನಿಗೆ ಹರಿದು ಬಂದಿತ್ತು.