

ಮಳೆರಾಯನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಅಪಾಯ ಕಣ್ಣೆದುರಲ್ಲೇ ಹಾದುಹೋಗುತ್ತಿದೆ. ಮನೆಗಳನ್ನು ಕಳೆದುಕೊಂಡು ನೆಲೆಯಲು ಸೂರಿಲ್ಲದೆ ಅದೆಷ್ಟೋ ಕುಟುಂಬಗಳು ಒದ್ದಾಡುತ್ತಿದೆ. ಇಂತಹ ಘಟನೆಗಳು ನಡೆಯುತ್ತಿದ್ದರೂ ಒಂಚೂರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ, ತಾವು ಆಡಿದ್ದೇ ಆಟ ಎಂದುಕೊಂಡು ಮನೋರಂಜನೆಗಾಗಿ ಸಮುದ್ರ ತೀರಕ್ಕೆ ತೆರಳಿದ ಜನರ ಗತಿ ಹೇಗಾಗಿದೆ ಎಂದು ನೀವೇ ನೋಡಿ.
ಹೌದು. ಅಪಾಯ ಎಂದು ಅರಿತಿದ್ದರೂ, ಸೆಲ್ಫಿ ತೆಗೆದುಕೊಳ್ಳುವ ಆಸೆಯಲ್ಲಿ ಸಮುದ್ರದ ದಡಕ್ಕೆ ಬಂದು 8 ಜನರು ಏಕಾಏಕಿ ದೊಡ್ಡ ಅಲೆಯಲ್ಲಿ ಕೊಚ್ಚಿಹೋಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು, ಕೆಲವರು ಸಮುದ್ರದ ಅಲೆಗಳಲ್ಲಿ ಮುಳುಗುತ್ತಿರುವ ದೃಶ್ಯ ಕಂಡು ಬಂದಿದೆ.
ಈ ಘಟನೆ ಒಮಾನ್‌ನ ಅಲ್ ಮುಗ್ಸೈಲ್ ಬೀಚ್‌ನಲ್ಲಿ ನಡೆದಿದೆ. ಕೆಲವರು ಸುರಕ್ಷತಾ ಬೇಲಿಯನ್ನು ನಿರ್ಲಕ್ಷಿಸಿ ಸಮುದ್ರದ ದಡಕ್ಕೆ ಬಂದು ಸೆಲ್ಫಿ ತೆಗೆದುಕೊಳ್ಳಲಾರಂಭಿಸಿದ್ದಾರೆ. ಸಮುದ್ರದ ಕಡೆಯಿಂದ ಬಲವಾದ ಅಲೆ ಎದ್ದರೂ ಗಮನಕ್ಕೆ ಬಾರದೆ ಜನರು ಮೋಜಿನಲ್ಲಿ ಮುಳುಗಿದ್ದರು. ಈ ಸಮಯದಲ್ಲಿ, ಅಲೆಯು ಅನೇಕ ಜನರನ್ನು ತನ್ನೊಂದಿಗೆ ಕರೆದೊಯ್ಯಲು ಪ್ರಾರಂಭಿಸಿತು. ಅಲೆಯ ಅಸಾಧಾರಣ ರೂಪ ಕಾಣಿಸಿಕೊಂಡ ತಕ್ಷಣ, ಜನರು ಪರಸ್ಪರ ಉಳಿಸಲು ಪ್ರಯತ್ನಿಸಿದರು.ಆದರೆ, ಎಂಟು ಜನರು ನೋಡ ನೋಡುತ್ತಿದಂತೆಯೇ ಕೊಚ್ಚಿ ಹೋಗಿದ್ದಾರೆ.
ಅಲೆಯ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದಾಗ ರಕ್ಷಿಸಲ್ಪಟ್ಟ ಮೂವರಿಗೆ ನಂತರ ವೈದ್ಯಾಧಿಕಾರಿಗಳು ಅಗತ್ಯ ಪ್ರಥಮ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಸಮುದ್ರದ ಅಲೆಗೆ ಕೊಚ್ಚಿ ಹೋದ ಕೆಲವರು ಇನ್ನೂ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.












