ಮಂಗಳೂರು | ಯಾವಾಗ ತನ್ನ ಮನೆ ಸೇರುವೆ ಎಂದು ಕಾಯುತ್ತಿರುವ ಶ್ವಾನ | ಮನಮಿಡಿಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಕರಾವಳಿಯಾದ್ಯಂತ ಎಲ್ಲೆಡೆ ಮಳೆ ಅಬ್ಬರ ಹೆಚ್ಚಾಗಿದೆ. ಹಲವೆಡೆ ಅಪಾರ ಆಸ್ತಿ ಪಾಸ್ತಿ ನಷ್ಟ ಉಂಟಾಗಿದೆ. ಮಳೆಯ ಅವಾಂತರದಿಂದಾಗಿ ಶಾಲಾ ಮಕ್ಕಳಿಗೆ ಕೂಡಾ ರಜೆ ನೀಡಲಾಗಿತ್ತು. ಜನಜೀವನ ಅಸ್ತವ್ಯಸ್ತಗೊಂಡಿತ್ತು. ಈ ಎಲ್ಲಾ ಘಟನೆಗಳು ಒಂದು ಕಡೆಯಾದರೆ ಒಂದು ಶ್ವಾನ ತನ್ನ ಮಾಲೀಕನಿಗಾಗಿ ಕಣ್ಣೀರಿಡುವ ಒಂದು ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಭಾರೀ ಮಳೆಯಿಂದ ಕೊಚ್ಚಿ ಹೋಗಿರುವ ಮರದ ಸೇತುವೆ ಮೇಲೆ ಶ್ವಾನವೊಂದು ತನ್ನ ಮನೆಯವರತ್ತ ನೋಡುತ್ತಿರುವ ಮನಕಲಕುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಹಲವು ಪ್ರಾಣಿಪ್ರಿಯರ ಕಣ್ಣು ಮಂಜಾಗಿಸಿದೆ.
ಇದು ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾ.ಪಂ. ವ್ಯಾಪ್ತಿಯ ಉಪ್ಪುಕಳ ಎಂಬಲ್ಲಿ ಮರದ ಪಾಲವೊಂದು, ಭಾರೀ ಮಳೆಗೆ ಕೊಚ್ಚಿ ಹೋಗಿತ್ತು. ಇದರಿಂದಾಗಿ 12 ಮನೆಗಳ ಸಂಪರ್ಕ ಕಡಿತಗೊಂಡಿದೆ. ಆ ಭಾಗದ ನಾಯಿಯೊಂದು ಮುರಿದಿರುವ ಮರದ ಪಾಲದ ಮೇಲೆ ಕುಳಿತುಕೊಂಡು ಆ ಭಾಗದಲ್ಲಿರುವ ತನ್ನವರ ಕಡೆಗೆ ನೋಡುತ್ತಿರುವ ಕರುಣಾಜನಕ ನೋಟದ ಫೋಟೋ ವೈರಲ್ ಆಗಿದೆ.
‘ನಾಯಿಗೂ ತನ್ನ ಮನೆ ಸೇರುವ ತವಕವಿದೆ’ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, ಇದೀಗ ಭಾರೀ ವೈರಲ್ ಆಗಿದೆ. ಚೇತನ್ ಕಜೆಗದ್ದೆ ಎಂಬವರು ತನ್ನ ಫೇಸ್ಬುಕ್ ಪೇಜ್ ನಲ್ಲಿ ಈ ಪೋಸ್ಟ್ ಮಾಡಿದ್ದಾರೆ.
ಎಲ್ಲಾದರೂ ಮನುಷ್ಯ ಸಿಲುಕಿದರೆ ಯುದ್ದೋಪಾದಿಯಲ್ಲಿ ಸಹಾಯ ಹಸ್ತ ಹರಿದು ಬರುತ್ತದೆ. ಆದರೆ ಪ್ರಾಣಿಗಳಿಗೆ ??! ‘ಬದುಕುವ ಹಕ್ಕು ನನಗೂ ಇದೆ, ಏನಾದ್ರೂ ಮಾಡ್ರಿ ಅಲ್ವಾ’ ಎಂದು ದೀನನಾಗಿ ಒಡೆಯನೆಡೆಗೆ ನೋಡುತ್ತಿದೆ ಈ ನಾಯಿ. ಆ ನಾಯಿ, ಇನ್ನೇನು ನನ್ನ ಯಜಮಾನ ಬರ್ತಾನೆ, ನನ್ನನ್ನು ಇಲ್ಲಿಂದ ಸೇಫ್ ಆಗಿ ಕರ್ಕೊಂಡು ಹೋಗ್ತಾನೆ ಎಂದು ಆಶಾಭಾವನೆಯಿಂದ ಕಾಯುವಂತಿದೆ. ಮನುಷ್ಯನ ಸದಾಕಾಲದ ಮಿತ್ರನಾಗಿ, ಇಡೀ ಕುಟುಂಬದ ಚೌಕಿದಾರನಾಗಿ ಮನೆ ಕಾಯುವ ಈ ನಾಯಿ ಈಗ ಮನೆಗೆ ಸೇರಿರಬಹುದೇ ಅಥವಾ ಸೇರಿಲ್ಲವೇ- ಅದು ಗೊತ್ತಿಲ್ಲ. ತನ್ನವರಿಗಾಗಿ ಆಸೆ ಕಣ್ಣುಗಳಿಂದ ನೋಡುವ ಆ ನೋಟ ಮಾತ್ರ ಎಂತವರ ಮನ ಹೃದಯ ಕಲಕಿದೆ.