Special News | ವಾರದ ನಂತರ ಶಾಲೆ : ‘ಮಳೆ ಬಾರದಿರಲಿ ‘ಎಂದು ಅಮ್ಮ, ‘ಈಗ್ಲೇ ಮೇಘಸ್ಪೋಟವಾಗಲಿ ‘ ಎಂದು ಪುಟಾಣಿಗಳು ; ಪ್ರಾರ್ಥಿಸಲು ಇಬ್ಬರಿಗೂ ವಿಭಿನ್ನ ಕಾರಣಗಳು !
ಪ್ರಫುಲ್ಲಿತವಾಗಿದೆ ಬೆಳಗು. ಮಳೆಗೆ ಈ ಬೆಳಿಗ್ಗೆ ಸ್ವಲ್ಪ ಮಟ್ಟಿಗಿನ ಬಿಡುವು. ಕರಾವಳಿ ಪ್ರದೇಶಗಳಲ್ಲಿ ಶಾಲೆಗಳು ಬಂದ್ ಆಗಿ ಒಂದು ವಾರ ಕಳೆದಿದೆ. ಮೊದಲಿಗೆ ಒಂದು ದಿನ ಮಹಾ ಮಳೆಗೆ ಅಂತ ಸಿಕ್ಕ ರಜ, ದಿನ ದಿನವೂ ಮುಂದೂಡಿಕೆಯಾಗಿ ಇವತ್ತು ಒಂದು ವಾರದ ನಂತರ, ಮಂಗಳವಾರ ಮತ್ತೆ ಶಾಲೆಗಳು ಶುರುವಾಗುತ್ತಿವೆ.
ವಾರಗಳಿಂದ ರಜೆಯ ಮಜಾ ಅನುಭವಿಸಿದ ಪುಟಾಣಿಗಳಲ್ಲಿ ಸಣ್ಣದೊಂದು ಉದಾಸೀನ. ” ಸ್ಕೂಲ್ ಗೆ ಹೋಗ್ಲೇ ಬೇಕಾ ಇವತ್ತು ?, ಸ್ಕೂಲ್ ಗೆ ಹೋದ ಮೇಲೆ ದೊಡ್ಡ ಮಳೆ ಬಂದ್ರೆ ?, ಹೊಟ್ಟೆನೋವು, ತಲೆನೋವು…” ಹೀಗೆ ಒಂದೊಂದು ಕಾರಣಗಳನ್ನು ಚಿಣ್ಣರು ಮನದ ಮೂಲೆಯಿಂದ ಹೆಕ್ಕಿ ತೆಗೆದು ಅಮ್ಮಂದಿರ ಮುಂದೆ ಇಡುತ್ತಿದ್ದಾರೆ. ಮಕ್ಕಳ ಇಂತದ್ದೆಲ್ಲ ಖಿಲಾಡಿ ಐಡಿಯಾಗಳನ್ನು ಆಡಿ – ನೋಡಿ ಬಲ್ಲ ಅಮ್ಮ ಯಾವುದನ್ನೂ ಕಿವಿಗೆ ಹಾಕಿಕೊಳ್ಳದೆ, ಮಕ್ಕಳ ಡಬ್ಬ, ಬೆನ್ನ ಮೇಲಿನ ಡುಬ್ಬದ ಜತೆಗೆ ರೈನ್ ಕೋಟ್ ಹೊಂದಿಸುತ್ತಿದ್ದಾಳೆ.
ವಾರಗಳ ನಂತರ ಶಾಲೆಗಳು ಶುರುವಾದ ಕಾರಣ ಈ ಔದಾಸ್ಯ. ಮಕ್ಕಳು ಏನೇ ಕಾರಣ ನೀಡಿದರೂ, ಶಾಲೆಗಳು ಇವತ್ತು ತೆರೆಯಲಿದೆ. ಮತ್ತೆ ಶಾಲೆಗಳ ಅಂಗಳದಲ್ಲಿ ಪುಟಾಣಿ ಗುಬ್ಬಿಗಳ ಕಲರವ ಕೇಳಿಸಲಿದೆ. ಆಟೋ ರಿಕ್ಷಾಗಳಲ್ಲಿ, ಸ್ಕೂಲು – ಬಸ್ಸುಗಳಲ್ಲಿ ಚಿಲಿಪಿಲಿ ಮಾರ್ದನಿ. ಹುಡುಗನ ಚಡ್ಡಿಯ ಮತ್ತು ಅತ್ತ ಪ್ಯಾಂಟ್ ಕೂಡ ಅಲ್ಲದ, ಇತ್ತ ಲಂಗ ಅಂತ ಅನ್ನಲಾರದ ಹುಡುಗಿಯ ಡ್ರೆಸ್ ನ ಜೇಬಿನಲ್ಲಿ ಚಿಲ್ಲರೆ ಝಳಪಿಸಿಕೊಂಡು ಹುಡುಗ ಹುಡುಗಿಯರು ಬರ್ತಾರೆ ಅಂತಲೇ ಸ್ಟೇಷನರಿ ಶಾಪುಗಳು ಮುಂಜಾನೆಯೇ ಅಂಗಡಿ ಬಾಗಿಲು ವಿಶಾಲವಾಗಿ ತೆರೆದು ಸ್ವಾಗತಿಸುತ್ತ ನಿಂತಿವೆ.
ಒಂದು ವಾರ ಸಮಯವಿದ್ದರೂ ಮುಟ್ಟದ ಪುಸ್ತಕಗಳನ್ನು ಹುಡುಕಿ, ಕೊನೆಯ ಕ್ಷಣದಲ್ಲಿ ಹೋಂ ವರ್ಕ್ ಮುಗಿಸಿ, ಈಗ ಸ್ಕೂಲಿನ ಹಾದಿಯಲ್ಲಿದ್ದಾರೆ. ಮಳೆಯ ನಡುವೆ ಮತ್ತೆ ಬದುಕು ಮಾಮೂಲು ಸ್ಥಿತಿಗೆ ತೆರೆದುಕೊಳ್ಳುತ್ತಿದೆ. ಒಂದು ವಾರದ ಪಾಠಗಳನ್ನು ಸರಿದೂಗಿಸಲು ಶನಿವಾರದ ರಜೆಗೆ ಕತ್ತರಿ ಬಿದ್ದಿದೆ. ದಸರಾ ರಜೆಗಳಿಗೆ ಕಡ್ಡಿ ಮಡಗಿದ್ದಾರೆ ಲೋಕಲ್ ಡಿಸಿ. ‘ ಮತ್ತೆ ಇಂಥ ಮಹಾಮಳೆ ಬರದೇ ಇರಲಿ’ ಅಂತ ಅಮ್ಮ ಅಂದುಕೊಳ್ಳುತ್ತಿದ್ದಾಳೆ. ‘ ಈಗ್ಲೇ ದೊಡ್ಡ ಮಳೆ ಬರಲಿ, ಅದೇನೋ, ಆಗುತ್ತಂತಲ್ಲಾ -ಮೇಘಸ್ಪೋಟ ಅದು ಆಗಲಿ ‘ ಎಂದು ಚಿಣ್ಣರು ಪ್ರಾರ್ಥಿಸಿಕೊಳ್ಳುತ್ತಿದ್ದಾರೆ. ಪ್ರಾರ್ಥಿಸಲು ಪ್ರತಿಯೊಬ್ಬರಿಗೂ ತನ್ನದೇ ಆದ ವಿಭಿನ್ನಕಾರಣಗಳಿವೆ !