ಮಂಗಳೂರು : ಬರೋಬ್ಬರಿ 11 ವರ್ಷಗಳ ಬಳಿಕ ಪಿಲಿಕುಳದಲ್ಲಿ ಕಾಳಿಂಗಗಳ ಜನನ! ಅದು ಕೂಡಾ ಎಷ್ಟು ಅಂತೀರಾ?

ಹಾವುಗಳು ಮೊಟ್ಟೆ ಇಡುವುದು ಸಾಮಾನ್ಯ ವಿಷಯ. ಆದರೆ ಮಂಗಳೂರಿನ ಹೊರವಲಯದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 8 ವರ್ಷದ ಎಂಬ ಕಾಳಿಂಗ ಸರ್ಪ ಮೊಟ್ಟೆ ಇಟ್ಟಿದೆ. ಇದರಲ್ಲೇನು ವಿಶೇಷ ಅಂತೀರಾ? ಹೇಳ್ತೀವಿ ಮುಂದೆ ಓದಿ.

 

ನಾಗಿಣಿ ಎಂಬ ಹೆಸರಿನ ಈ ಕಾಳಿಂಗ ಸರ್ಪ 38 ಮೊಟ್ಟೆಗಳನ್ನು ಇಟ್ಟಿದ್ದು, ಕೃತಕ ಕಾವು ನೀಡಿ, ಇದೀಗ ಮೊಟ್ಟೆಯೊಡೆದು ಹೊರ ಬರಲಾರಂಭಿಸಿವೆ. ಈ ಮೂಲಕ 11 ವರ್ಷಗಳ ಬಳಿಕ ಪಿಲಿಕುಳದಲ್ಲಿ ಕಾಳಿಂಗ ಸರ್ಪಗಳ ಜನನವಾದಂತಾಗಿದೆ. ಹೌದು ಕಾಳಿಂಗ ಸರ್ಪ ಮೊಟ್ಟೆ ಇಡೋಕೆ ಬರೋಬ್ಬರಿ 11 ವರ್ಷ ಕಾಯಬೇಕಾಯಿತು ಈ ಜೈವಿಕ ಉದ್ಯಾನವನ.

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವಿಶ್ವದಲ್ಲೇ ಪ್ರಥಮ ಬಾರಿಗೆ ಅಸಾಧ್ಯವೆಂದು ಪರಿಗಣಿಸಲಾಗಿದ್ದ ಸಂರಕ್ಷಿತ ಪರಿಸರದಲ್ಲಿನ ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿ ಮಾಡಿ ದಾಖಲೆ ಸಾಧಿಸಲಾಗಿತ್ತು. ಈ ವರ್ಷ ಹೊಸದಿಲ್ಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರವು ಪಿಲಿಕುಳ ಮೃಗಾಲಯಕ್ಕೆ ಕಾಳಿಂಗ ಸರ್ಪ ಮತ್ತು ಮಲಬಾರ್ ಕೆಂಚಳಿಲು ಸಂತಾನೋತ್ಪತ್ತಿಯ ಯೋಜನೆ ನೀಡಿತ್ತು. ಕಾಳಿಂಗವು ಅರಣ್ಯದಲ್ಲಿ ಸಂತಾನೋತ್ಪತ್ತಿ ಮಾಡುವುದು ಸಾಮಾನ್ಯ, ಆದರೆ ಮಾನವನ ರಕ್ಷಣೆಯಲ್ಲಿ ಸಂತಾನೋತ್ಪತ್ತಿಯಾಗಿರುವುದು ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹೇಳಲಾಗಿದೆ.

ಪಿಲಿಕುಳ ಉದ್ಯಾನವನದಲ್ಲಿ 8 ವರ್ಷದ ನಾಗಿಣಿ 38 ಮೊಟ್ಟೆಗಳನ್ನಿಟ್ಟಿದ್ದು, ಮೃಗಾಲಯದ ಅಧಿಕಾರಿಗಳು ಅವುಗಳನ್ನು ಪ್ರಯೋಗಾಲಯದಲ್ಲಿ ಇರಿಸಿ ಕೃತಕ ಕಾವು ನೀಡುವ ವ್ಯವಸ್ಥೆ ಕಲ್ಪಿಸಿದ್ದರು. 76 ದಿನಗಳ ನಂತರ ಮರಿಗಳು ಮೊಟ್ಟೆಯೊಡೆದು ಬರಲಾರಂಭಿಸಿದೆ. ಈಗಾಗಲೇ ಸುಮಾರು 31 ಮರಿಗಳು ಹೊರಬಂದಿದ್ದು, ಸುಮಾರು ಒಂದೂವರೆ ಅಡಿ ಉದ್ದವಿದೆ.

ಮಾನವನ ರಕ್ಷಣೆಯಲ್ಲಿ ಪಿಲಿಕುಳದಲ್ಲಿ 11 ವರ್ಷದ ಬಳಿಕ ಕಾಳಿಂಗ ಮರಿಗಳ ಜನನವಾಗಿದ್ದು, ಸಂತಾನೋತ್ಪತ್ತಿ ಆಗಿರುವುದು ವಿಶೇಷವಾಗಿದೆ. ಈಗ ಮರಿಗಳಿಗೆ ಒತ್ತಾಯಪೂರ್ವಕ ಬಾಯಿಗೆ ಆಹಾರವನ್ನು ತಿನಿಸಬೇಕಾಗಿದ್ದು, ಅವುಗಳು ಬೆಳೆದ ನಂತರ ಕಾಡಿಗೆ ಬಿಡುಗಡೆ ಮಾಡಲಾಗುವುದು ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕರಾದ ಎಚ್. ಜಯಪ್ರಕಾಶ್ ಭಂಡಾರಿ ಹೇಳಿದ್ದಾರೆ.

Leave A Reply

Your email address will not be published.