ಮಂಗಳೂರಿನಲ್ಲೂ ಯೋಗಿ ಮಾಡೆಲ್ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ, ಅಕ್ರಮ ಗೋ ಹತ್ಯೆ ಪ್ರಕರಣದ ಬೆನ್ನು ಬಿದ್ದ ಭರತ್ ಶೆಟ್ಟಿ !
ಮಂಗಳೂರು : ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ಸ್ಪೂರ್ತಿ ಪಡೆದಂತೆ, ಮಂಗಳೂರಿನಲ್ಲಿ ಕೂಡ ಆಸ್ತಿ ಮುಟ್ಟುಗೋಲಿಗೆ ಯೋಜನೆಗಳು ಸಜ್ಜಾಗುತ್ತಿವೆ. ಈ ನಿಟ್ಟಿನಲ್ಲಿ ಸುರತ್ಕಲ್ ಶಾಸಕ ಭರತ್ ಶೆಟ್ಟಿ ನಿರ್ದೇಶನದಂತೆ ಪ್ರಕ್ರಿಯೆಗಳು ಶುರುವಾಗಿವೆ.
ಅಕ್ರಮ ಗೋ ಹತ್ಯೆ ಪ್ರಕರಣಗಳನ್ನು ಜಾನುವಾರು ಹತ್ಯೆ ಪ್ರತಿಬಂಧಕ ಕಾಯಿದೆ 2020ರ ಅನ್ವಯ ನಿಭಾಯಿಸುವಂತೆ ಶಾಸಕ ಡಾ.ಭರತ್ ಶೆಟ್ಟಿ ವೈ ಅವರ ಸೂಚನೆಯ ಮೇರೆಗೆ ಇದೀಗ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಕಾರ್ಯಪ್ರವೃತ್ತವಾಗಿದ್ದಾರೆ.
ಅರ್ಕುಳ ಗ್ರಾಮದ ಅರ್ಕುಳ ಕೋಟೆಯ ನಿವಾಸಿ ಎ.ಕೆ. ಖಾಲಿದ್ ತನ್ನ ಮನೆಗೆ ತಾಗಿಕೊಂಡಿದ್ದ ಶೆಡ್ ನಲ್ಲಿ ನಡೆಸುತ್ತಿದ್ದ. ಅಡ್ಯಾರ್ ಅಕ್ರಮ ಗೋ ಹತ್ಯೆ ಪ್ರಕರಣ ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈಗ ಆರೋಪಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಲಾಗಿದೆ. ಆತ ಜು.12 ರಂದು ಸಹಾಯಕ ಆಯುಕ್ತರ ನ್ಯಾಯಲಯದಲ್ಲಿ ವಿಚಾರಣೆ ಬರಲಿದೆ. ಪರವಾನಿಗೆ ಇಲ್ಲದೆ ದನ ಕಡಿದು ಮಾರಾಟ ಮಾಡಿದ ಜಾಗ,ಶೆಡ್ ,ಕತ್ತಿ, ತೂಕಯಂತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ಸೊತ್ತು ಮೌಲ್ಯಮಾಪನ ಮಾಡಿ ವರದಿ ಸಲ್ಲಿಕೆಗೆ ಆದೇಶ ನೀಡಲಾಗಿದೆ.
ತನ್ನ ಮನೆಗೆ ತಾಗಿಕೊಂಡಿದ್ದ ಶೆಡ್ ನಲ್ಲಿ ನಡೆಸುತ್ತಿದ್ದ ಅಕ್ರಮ ಕಸಾಯಿಖಾನೆ ಮತ್ತು ಅಲ್ಲಿ ಗೋಹತ್ಯೆಗೆ ಬಳಸಿದ ಸ್ವತ್ತುಗಳನ್ನು ಮುಟ್ಟುಗೋಲು ಹಾಕುವ ಪ್ರಕ್ರಿಯೆಯನ್ನು ಪೊಲೀಸ್ ಅಧಿಕಾರಿಗಳು ಆರಂಭಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿಯವರು ನಮ್ಮ ರಾಜ್ಯ ಸರಕಾರ ಜಾರಿಗೆ ತಂದಿರುವ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಲ್ಲಿ ಅದರ ಉದ್ದೇಶ ಈಡೇರಿದಂತಾಗುತ್ತದೆ. ಆರೋಪಿಗಳ ಸ್ವತ್ತುಗಳನ್ನು ಮುಟ್ಟುಗೋಲು ಹಾಕಲು ಅಧಿಕಾರಿಗಳಿಗೆ ಕಾಯ್ದೆಯಲ್ಲಿಯೇ ಅಧಿಕಾರ ನೀಡಲಾಗಿದೆ. ಅಧಿಕಾರಿಗಳು ಖಡಕ್ಕಾಗಿ ಬಳಸುವ ಮೂಲಕ ಗೋಹಂತಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಗೋಹಂತಕರ ವಿರುದ್ಧ ನಿರ್ದಾಕ್ಷಿಣವಾಗಿ ಕ್ರಮ ತೆಗೆದುಕೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದ್ದು, ಕಾಯ್ದೆಯಲ್ಲಿ ನೀಡಲಾಗಿರುವ ಅಧಿಕಾರವನ್ನು ಬಳಸಿ ಅರ್ಕುಳದ ಖಾಲಿದ್ ಸ್ವತ್ತನ್ನು ಮುಟ್ಟುಗೋಲು ಹಾಕುವ ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದರು.