ಸರಳವಾಸ್ತು ಚಂದ್ರಶೇಖರ್ ಗುರೂಜಿ ಹಂತಕರ ಬಂಧನವೇ ಒಂದು ಮಿಂಚಿನ ರೋಚಕ ಕಹಾನಿ
ರಾಮದುರ್ಗ: ಚಂದ್ರಶೇಖರ ಗುರೂಜಿ ಕೊಲೆ ಆರೋಪಿಗಳನ್ನು ರಾಮದುರ್ಗ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹಿಡಿದು ಹಾಕಿದ್ದಾರೆ. 22 ಪೊಲೀಸರು ನಾಲ್ಕು ತಂಡಗಳಲ್ಲಿ ಹಂಚಿ ಹೋಗಿ ಆರೋಪಿಗಳನ್ನು ಕೇವಲ 4 ಗಂಟೆಗಳಲ್ಲಿ ಹಿಡಿದು ಬಿಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ನಿನ್ನೆ ಹಾಗೆ ಸುಮಾರು ನಿಮಿಷಗಳ ಕಾಲ ಒಟ್ಟು 60 ಬಾರಿ ಚುಚ್ಚಿ ತಿವಿದು ಬರ್ಬರ ವಾಗಿ ಕೊಲೆ ಮಾಡಿ ಪರಾರಿಯಾದ ನಂತರವೂ ಆರೋಪಿಗಳ ಮೊಬೈಲ್‌ಗಳು ಸ್ವಿಚ್ ಆಫ್ ಆಗಿರಲಿಲ್ಲ. ಮೇಲಿಂದ ಮೇಲೆ ಫೋನ್ ಮಾಡಿ ತಮ್ಮ ಆಪ್ತ ಜನರಲ್ಲಿ ಮಾತನಾಡಿದ್ದರು. ಇದರಿಂದಾಗಿ ಹುಬ್ಬಳ್ಳಿ ಪೊಲೀಸರಿಗೆ ಈ ಇಬ್ಬರ ಮೊಬೈಲ್ ಲೊಕೇಶನ್‌ಗಳನ್ನೂ ಪತ್ತೆ ಮಾಡಲು ಸಾಧ್ಯವಾಯಿತು.
ಕೊಲೆ ತಕ್ಷಣ ಕಾರ್ಯಪ್ರವೃತ್ತರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಪಾಟೀಲ, 22 ಪೊಲೀಸರ ನಾಲ್ಕು ತಂಡಗಳನ್ನು ರಚಿಸಿದರು. ರಾಮದುರ್ಗ ಪೊಲೀಸರಿಗೆ ಅವರ ಚಲನ– ವಲನಗಳ ನಿರಂತರ ಅಪ್ಡೇಟ್ ರವಾನಿಸಲಾಯಿತು. ಅಲ್ಲಿ ತಡಮಾಡುವಂತೆಯೇ ಇರಲಿಲ್ಲ ಯಾಕೆಂದರೆ ಆರೋಪಿಗಳು ಧಾರವಾಡದ ಕಡೆ ತಿರುಗಿ, ಮತ್ತೆ ವಿರುದ್ಧ ದಿಕ್ಕಿನಲ್ಲಿ ಚಲಿಸಿ ಬೆಳಗಾವಿಯತ್ತ ಕಾರಲ್ಲಿ ಹೊರಟಿದ್ದರು. ಸಮಯ ಕಳೆದಷ್ಟು ಆರೋಪಿಗಳು ತಪ್ಪಿಸಿಕೊಳ್ಳುವ ಅವಕಾಶ ಜಾಸ್ತಿ. ಹಾಗಾಗಿ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಬೇಕಿತ್ತು.
ಅಲ್ಲೇ ರಾಮದುರ್ಗ ಪಟ್ಟಣಕ್ಕೆ ಹೊಂದಿಕೊಂಡಿರುವ ರಾಜ್ಯ ಹೆದ್ದಾರಿಯಲ್ಲಿ ಪೊಲೀಸರ ತಂಡಗಳು ಮಫ್ತಿಯಲ್ಲಿ ನಿಂತರು. ಅಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಬಸವೇಶ್ವರ ವೃತ್ತಗಳಲ್ಲಿ ತಲಾ ಎರಡು ಟ್ರ್ಯಾಕ್ಟರ್‌ಗಳನ್ನು ತಕ್ಷಣ ಅಡ್ಡ ತಂದು ನಿಲ್ಲಿಸಿದರು. ಈ ಮಾರ್ಗದಲ್ಲಿ ಹೋಗುವ ಪ್ರತಿಯೊಂದು ವಾಹನವನ್ನೂ ನಿಲ್ಲಿಸಿ ತಪಾಸಣೆ ಮಾಡಿದರು.
ಆರೋಪಿಗಳು ಹೊರಟಿದ್ದ ಕಾರಿನ ನಂಬರ್ ಕೂಡಾ ಪತ್ತೆ ಮಾಡಿದ್ದ ಹುಬ್ಬಳ್ಳಿ ಪೊಲೀಸರು, ಕಾರ್ಯಾಚರಣೆಯನ್ನು ಇನ್ನಷ್ಟು ಸುಲಭ ಮಾಡಿಕೊಂಡರು. ಆದರೂ ಮಾರ್ಗ ಮಧ್ಯ, ವಾಹನ ಬದಲಾಯಿಸುವ ಸಾಧ್ಯತೆ ಇರುವ ಕಾರಣ ಪೊಲೀಸರು ಎಲ್ಲ ವಾಹನಗಳನ್ನೂ ತೀಕ್ಷ್ಣವಾಗಿ ತಪಾಸಣೆ ಮಾಡಿದರು.
ಆಗ ಕಾರು ಮೊದಲು ಕಾಣಿಸಿಕೊಂಡಿತ್ತು. ರಾಮದುರ್ಗಕ್ಕಿಂತಲೂ 10 ಕಿ.ಮೀ ಮುಂಚೆ ಬರುವ ಮುಳ್ಳೂರು ಘಾಟ್ ಹತ್ತಿರ ಆರೋಪಿಗಳ ವಾಹನ ಪಾಸ್ ಆಯಿತು. ಈ ಘಾಟ್ ದಾಟಿ ಬರುವುದನ್ನೇ ಕಾಯುತ್ತಿದ್ದರು ಪೊಲೀಸರು. ಅಷ್ಟರಲ್ಲಿ ಪಕ್ಕದಲ್ಲಿ ಒಬ್ಬರು ಜೆಸಿಬಿ ಸ್ಟಾರ್ಟ್ ಮಾಡಿ ಪೊಲೀಸರ ಅನತಿಗೆ ಕಾಯುತ್ತಿದ್ದರು. ಪೋಲಿಸ್ ಸಿಗ್ನಲ್ ಸಿಕ್ಕಾಗ ಜೆಸಿಬಿ ಮುಂದೆ ಚಲಿಸಿ, ರಸ್ತೆಗೆ ಪೂರ್ತಿ ಅಡ್ಡವಾಗಿ ನಿಂತು ಬಿಡ್ತು. ಆರೋಪಿಗಳು ಅತ್ತಿತ್ತ ಸುಳಿಯದಂತೆ ಸಿಕ್ಕಿಬಿದ್ದರು. ಕಾರಣ ಈ ರಸ್ತೆಯಲ್ಲಿ ಎಡ ಬಲಕ್ಕೆ ಯಾವುದೇ ಮಾರ್ಗವಿಲ್ಲ. ತಪ್ಪಿಸಿಕೊಳ್ಳಬೇಕೆಂದರೂ ‘ಯು’ ಟರ್ನ್ ಮಾಡಬೇಕು. ಇದಕ್ಕೂ ಅವಕಾಶ ಕೊಡದ ಪೊಲೀಸರು ಕಾರ್ ಹಿಂಬದಿಯಲ್ಲೂ ಮೊದಲೇ ಪ್ಲಾನ್ ಮಾಡಿದ್ದ ಟ್ರ್ಯಾಕ್ಟರ್ ಅನ್ನು ಜರುಗಿಸಿ ನಿಲ್ಲಿಸಿ ಎಲ್ಲಾ ದಾರಿ ಬಂದ್ ಮಾಡಿದರು.
ಕಾರಿನಿಂದ ಅವರು ಇಳಿದು ಓಡುವಂತೆಯೇ ಇರಲಿಲ್ಲ. ಕಾರಣ ದೈತ್ಯ ದೇಹದ ‘ ಯೂನಿಫಾರ್ಮ್ ‘ ಗಳ ಕೈಯಲ್ಲಿ ಕಪ್ಪಗಿನ ಲೋಡೆಡ್ ರಿವಾಲ್ವರ್ ರೆಡಿ ಆಗಿತ್ತು. ಪೊಲೀಸರು ಅದನ್ನು ಗಾಳಿಯಲ್ಲಿ ‘ಫ್ಲಾಶ್ ‘ ಮಾಡುತ್ತಿದ್ದರು. ಆ ಭಯಕ್ಕೆ ಆರೋಪಿಗಳು ಓಡಿ ತಪ್ಪಿಸಿಕೊಳ್ಳುವ ಹಾಗೇ ಇರಲಿಲ್ಲ. ನಿಜಕ್ಕೂ ಪೊಲೀಸರೇ ಹೋಗಿ ಕಾರು ಬಾಗಿಲು ತೆಗೆದು ಆರೋಪಿಗಳನ್ನು ಕೆಳಕ್ಕೆ ಇಳಿಸಬೇಕಾಯಿತು ! ಅಷ್ಟರ ಮಟ್ಟಿಗೆ ಖಾಕಿ ತನ್ನ ಖದರ್ ಮತ್ತು ಮೆಂಟಲ್ ಪವರ್ ಬಳಸಿ ಆಪರೇಶನ್ ಸಕ್ಸಸ್ ಮಾಡಿದ್ದರು.
ಕಾರಿನಲ್ಲಿದ್ದ ಮೂರು ಜನ ಆರೋಪಿಗಳ ಕೈಗಳನ್ನು ಹಿಂದಕ್ಕೆ ಮಡಚಿ ಹಿಡಿದು, ಗನ್ ಪಾಯಿಂಟಿನಿಂದ ಠಾಣೆಗೆ ಎಳೆದು ತಂದಿದ್ದಾರೆ. ವಿಚಾರಣೆ ಸಾಗಿದ್ದು, ಮುಖ್ಯ ಆರೋಪಿ ಮಹಂತೇಶ ಶಿರೋಳ್ ಒಂದು ಕಾಲದಲ್ಲಿ ಗುರೂಜಿಯ ಆಪ್ತ. ಆತನ ಪತ್ನಿ ವನಜಾಕ್ಷಿ ಹೆಸರಿನಲ್ಲಿ ಚಂದ್ರಶೇಖರ ಗುರೂಜಿ ಅವರು ಬೇನಾಮಿ ಆಸ್ತಿ ಮಾಡಿದ್ದರು. ವನಜಾಕ್ಷಿ ಕೂಡ ಗುರೂಜಿಯ ಆಫೀಸಿನಲ್ಲಿಯೇ ಕೆಲಸ ಮಾಡುತ್ತಿದ್ದರು. ಅವರಿಬ್ಬರ ಮಧ್ಯ ವೈಮನಸ್ಸು ಮೂಡಿದಾಗ ಇಬ್ಬರನ್ನು ಕೆಲಸದಿಂದ ತೆಗೆದುಹಾಕಿದ್ದರು. ಅದು ಅವರಿಬ್ಬರಲ್ಲಿ ಮುನಿಸಿಗೆ ಕಾರಣವಾಗಿತ್ತು.
ಆರೋಪಿ ಮಹಾಂತೇಶ ಶಿರೂರ ಎಂಬಾತನ ಫೇಸ್ ಬುಕ್ ಪ್ರೊಫೈಲ್‌ನಲ್ಲಿನ ಒಂದು ಶೇರ್ ಕೊಲೆ ಸಂಚಿನ ಕುರಿತ ಸುಳಿವು ನೀಡುವಂತಿದೆ. ಜೂ.30ರಂದು ಈ ಆರೋಪಿ ಇನ್ನೊಂದು ಫೇಸ್‌ಬುಕ್ ಖಾತೆಯಲ್ಲಿನ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಂಡಿದ್ದಾನೆ.
ಆ ಪೋಸ್ಟ್‌ನಲ್ಲಿನ ವಿವರ ಹೀಗಿದೆ.. “ಅಧರ್ಮ ತಾಂಡವವಾಡುತ್ತಿರುವಾಗ ದುಷ್ಟರನ್ನು ನಾಶ ಮಾಡಲು ಮತ್ತು ಧರ್ಮವನ್ನು ಪುನಃ ಸ್ಥಾಪಿಸಲು ನೀನು ಬರುವುದಾಗಿ ವಚನ ನೀಡಿರುವೆ ಪ್ರಭು. ಇನ್ನೂ ವಿಳಂಬವೇತಕೆ ಭಗವಂತ? ಆದಷ್ಟು ಬೇಗ ಅವತರಿಸು ಪ್ರಭು, ಸಂಭವಾಮಿ ಯುಗೇ ಯುಗೇ “
ಗುರೂಜಿಯನ್ನು ದುಷ್ಟ ಎಂದುಕೊಂಡಿರುವ ಆರೋಪಿ ಐದು ದಿನಗಳ ಹಿಂದೆಯೇ ಅಧರ್ಮ ವನ್ನು ನಾಶ ಮಾಡುವ ಯೋಚನೆಯನ್ನು ಹೊಂದಿದ್ದನಾ? ಎಂಬ ಚರ್ಚೆ ಈಗ ಕೆಲವೆಡೆ ಕೇಳಿಬರಲಾರಂಭಿಸಿದೆ.
ಅಲ್ಲದೆ ಚಂದ್ರಶೇಖರ ಗುರೂಜಿ ಅವರು ಮೇಲಾಮಿ ಆಸ್ತಿ ಮಾಡುವಾಗ ಮೌಖಿಕವಾಗಿ ಅಗ್ರಿಮೆಂಟ್ ಮಾಡಿಕೊಂಡಂತೆ ತಮ್ಮ ಆಸ್ತಿಯನ್ನು ತಮಗೆ ವಾಪಸ್ ಕೊಡಬೇಕು ಎಂದು ಒತ್ತಡ ಹೇರುತ್ತಿದ್ದರು. ಅದೇ ಕಾರಣಕ್ಕಾಗಿ ಈ ಕೊಲೆ ನಡೆದಿದೆ ಎನ್ನುವ ಬಲವಾದ ಗುಮಾನಿ.
ಆದರೂ ಅಷ್ಟು ಕ್ರೂರವಾಗಿ ನಿಮಿಷಗಳ ಕಾಲ ನಿರಂತರ ಚುಚ್ಚಿ ಕೊಳ್ಳಲು ಇದಕ್ಕಿಂತಲೂ ಇನ್ನೇನೋ ‘ಬಲವಾದ ‘ ಕಾರಣ ಇರಲೇಬೇಕು ಎನ್ನುವುದು, ಇಂತಹಾ ಹಲವಾರು ಬರ್ಬರ ಕ್ರಿಮಿನಲ್ ಕೃತ್ಯಗಳನ್ನು ಕಂಡು, ತನಿಖೆ ಮಾಡಿದ ಅಧಿಕಾರಿಯೊಬ್ಬರ ಮಾತು. ಅದೇನೆಂದು ತಿಳಿಯಲು ಇನ್ನು ಕೆಳಗೆ ಗಂಟೆಗಳು ಸಾಕು: ತನಿಖೆ ಅಂಡರ್ ಪ್ರೋಗ್ರೆಸ್!
ಎಫ್ ಐಆರ್ ನಲ್ಲಿ ಏನಿದೆ?
‘ಸರಳ ವಾಸ್ತು ಸಂಸ್ಥೆಯಲ್ಲಿ ಅವ್ಯವಹಾರ ನಡೆಸಿದ್ದ ಕಾರಣಕ್ಕೆ ಮಹಾಂತೇಶ ಅವರನ್ನು ಚಂದ್ರಶೇಖರ ಗುರೂಜಿ ಕೆಲಸದಿಂದ ತೆಗೆದಿದ್ದರು. ಆ ಸಿಟ್ಟಿನಿಂದ ಹುಬ್ಬಳ್ಳಿ ಗೋಕುಲ ರಸ್ತೆ, ಜೆಸಿ ನಗರದಲ್ಲಿ ಗುರೂಜಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನಲ್ಲಿ ಪಾರ್ಕಿಂಗ್‌ಗೆ ಜಾಗ ಕೊಟ್ಟಿರಲಿಲ್ಲ ಹಾಗೂ ಸೋಲಾರ್ ವ್ಯವಸ್ಥೆ ಅಳವಡಿಕೆ ಮಾಡಿಲ್ಲ ಎಂದು ಮಹಾಂತೇಶ ಧಾರವಾಡ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ಹಿಂಪಡೆಯಲು ಗುರೂಜಿ ಅವರಲ್ಲಿ ಹಣ ಕೇಳುತ್ತಿದ್ದರು. ಆಗಾಗ ಜೀವ ಬೆದರಿಕೆ ಹಾಕಿ ಮಾನಸಿಕ ಹಿಂಸೆ ನೀಡುತ್ತಿದ್ದರು. ಹಣ ನೀಡದ ಹಿನ್ನೆಲೆಯಲ್ಲಿ ಹಾಗೂ ಕೆಲಸದಿಂದ ತೆಗೆದು ಹಾಕಿದ್ದರಿಂದ ಹತ್ಯೆ ಮಾಡಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.