ಟೈಲರ್ ಶಿರಚ್ಛೇದ ಪ್ರಕರಣ: ಬೆದರಿಕೆ ಕರೆ ದೂರು ನಿರ್ಲಕ್ಷ್ಯಿಸಿದ್ದ ASI ಅಮಾನತು
ಜೈಪುರ: ಟೈಲರ್ ಕನ್ಹಯ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ಆರೋಪದಡಿ ಉದಯಪುರದ ಧನ್ ಮಂಡಿ ಪೊಲೀಸ್ ಠಾಣೆಯ ಎಎಸ್‌ಐ ಒಬ್ಬರನ್ನು ಅಮಾನತು ಮಾಡಲಾಗಿದೆ. ಬೆದರಿಕೆ ಕರೆ ಬರುತ್ತಿರುವ ದೂರನ್ನು ಎಎಸ್‌ಐ ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಆರೋಪಿಸಲಾಗಿದೆ. ಅದರಂತೆ ಈಗ ಎಎಸ್‌ಐ ಒಬ್ಬರನ್ನು ಅಮಾನತು ಮಾಡಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹವಾ ಸಿಂಗ್ ಘುಮಾರಿಯಾ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡಿದ್ದಕ್ಕಾಗಿ ಜೂನ್ 11 ರಂದೇ ಕನ್ಹಯ್ಯ ಲಾಲ್ ವಿರುದ್ಧ ಎಫ್‌ಐಆರ್ ದಾಖಲಿಸಿ ಆತನನ್ನು ಬಂಧಿಸಲಾಗಿತ್ತು.
ನಂತರ ಜೂನ್ 15ರಂದು ಕನ್ಹಯ್ಯ ಅಪಾಯಕಾರಿ ಅಲ್ಲ ಎಂದರಿತು ಜಾಮೀನಿನ ಮೇಲೆ ಕೋರ್ಟು ಆತನನ್ನು ಬಿಡುಗಡೆ ಮಾಡಿತ್ತು. ಬಿಡುಗಡೆಯಾದ ಬಳಿಕ ತಮಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದರು. ದೂರಿನ ಬಳಿಕ ಸ್ಥಳೀಯ ಠಾಣಾಧಿಕಾರಿಯು ದೂರುದಾರರು ಮತ್ತು ಎರಡೂ ಸಮುದಾಯದ ಮುಖಂಡರನ್ನು ಠಾಣೆಗೆ ಕರೆಸಿ ರಾಜಿ ಮಾತುಕತೆ ನಡೆಸಿದ್ದರು. ಆದರೂ ಬಿಡುಗಡೆಯಾದ ನಂತರ ತಮಗೆ ಬರುತ್ತಿರುವ ಬೆದರಿಕೆ ಕರೆಗಳ ಬಗ್ಗೆ ಕನ್ಹಯ್ಯ ಲಾಲ್ ದೂರು ನೀಡಿದ್ದರು.
ಆದರೆ, ನಿನ್ನೆ ದುಷ್ಕರ್ಮಿಗಳು ಕನ್ಹಯ್ಯನ ಹತ್ಯೆ ಮಾಡಿದ್ದು, ಧನ್ ಮಂಡಿ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಂಡಿದ್ದ ಎಎಸ್‌ಐ ಭನ್ವರ್ ಲಾಲ್ ಅವರನ್ನು ನಿರ್ಲಕ್ಷ್ಯದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ ಎಂದು ಉದಯಪುರದ ಪೊಲೀಸ್ ಮಹಾನಿರೀಕ್ಷಕ ಹಿಂಗ್ಲಾಜ್ ಡಾನ್ ತಿಳಿಸಿದ್ದಾರೆ. ಮಧ್ಯಸ್ಥಿಕೆ ವಹಿಸಿದ್ದವರನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಡಿಜಿ ತಿಳಿಸಿದ್ದಾರೆ.
ನಿನ್ನೆ, ಮಂಗಳವಾರ ಮಧ್ಯಾಹ್ನ ಇಬ್ಬರು ದುಷ್ಕರ್ಮಿಗಳು ಧನ್ ಮಂಡಿ ಪ್ರದೇಶದ ಟೈಲರ್ ಕನ್ಹಯ್ಯ ಲಾಲ್ ಅವರ ಶಿರಛೇಧ ಮಾಡಿದ್ದರು. ನಂತರ ಅದರ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದ ದುಷ್ಕರ್ಮಿಗಳು, ಇಸ್ಲಾಂ ಧರ್ಮ ಮತ್ತು ಪ್ರವಾದಿ ಮಹಮ್ಮದ್ ಅವರಿಗೆ ಅಪಮಾನ ಮಾಡಿದ್ದಕ್ಕಾಗಿ ಸೇಡು ತೀರಿಸಿಕೊಳ್ಳುತ್ತಿದ್ದೇವೆ ಎಂದು ವಿಡಿಯೋದಲ್ಲಿ ಹೇಳಿದ್ದರು. ಅಲ್ಲದೇ , ಇದೆ ಕತ್ತಿಯಿಂದ ಪ್ರಧಾನಿ ಮೋದಿಯನ್ನು ಹತ್ಯೆಮಾಡುವುದಾಗಿ ಘೋಷಿಸಿದ್ದರು.