ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಖಾದರ್ ಭಾಗಿ, ಎಚ್ಚರಿಕೆ ನೀಡಿದ ಮುಸ್ಲಿಂ ಲೀಗ್
ಆರ್ಎಸ್ಎಎಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಖಾದರ್ ಅವರಿಗೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಭಾನುವಾರ ಎಚ್ಚರಿಕೆ ನೀಡಿದೆ.
‘ಸ್ನೇಹಬೋಧಿ’ ಎಂಬ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಖಾದರ್ ಅವರನ್ನು ಸನ್ಮಾನ ಮಾಡಲಾಗಿತ್ತು. ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ್ದ ಖಾದರ್ ಅವರು, ‘ಉತ್ತರ ಭಾರತದ ಅನೇಕ ದೇವಾಲಯಗಳಿಗೆ ನಾನು ಭೇಟಿ ನೀಡಿರುವೆ. ಆದರೆ, ಗುರುವಾಯೂರಿನ ಶ್ರೀಕೃಷ್ಣ ದೇವಸ್ಥಾನ ಪ್ರವೇಶಿಸುವುದು ಸಾಧ್ಯವಾಗಿಲ್ಲ. ಈ ದೇವಾಲಯವನ್ನು ಪ್ರವೇಶಿಸುವ ಅಪೇಕ್ಷೆ ಇದೆ’ ಎಂದು ಹೇಳಿದ್ದರು. ಈ ಹೇಳಿಕೆ ನೀಡಿದ ಬೆನ್ನಲ್ಲೇ, ಅವರಿಗೆ ಪಕ್ಷದಿಂದ ಎಚ್ಚರಿಕೆ ನೀಡಲಾಗಿದೆ.
ಇತ್ತೀಚೆಗೆ ಕೋಯಿಕ್ಕೋಡ್ನಲ್ಲಿ ಆರ್ಎಸ್ಎಎಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಕೆ.ಎನ್.ಎ.ಖಾದರ್ ಅವರಿಗೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಭಾನುವಾರ ಎಚ್ಚರಿಕೆ ನೀಡಿದೆ.
‘ಖಾದರ್ ಅವರು ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಸಂಬಂಧಿಸಿ ಅವರು ನೀಡಿದ ವಿವರಣೆ ಕುರಿತು ಪಕ್ಷದ ಸಭೆಯಲ್ಲಿ ಚರ್ಚಿಸಲಾಯಿತು. ಪಕ್ಷದ ಪರಂಪರೆಯ ವಿರುದ್ಧವಾಗಿ ನಡೆದುಕೊಂಡಿದ್ದಕ್ಕಾಗಿ ಖಾದರ್ ಅವರಿಗೆ ಎಚ್ಚರಿಕೆ ನೀಡುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು’ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಭಾಷಣ ಹಾಗೂ ಸಾರ್ವಜನಿಕವಾಗಿ ನೀಡುವ ಹೇಳಿಕೆಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಈ ವಿಷಯದಲ್ಲಿ ಪಕ್ಷದ ನೀತಿ-ನಿಯಮಗಳನ್ನು ಪಾಲಿಸುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.