ನೂಪುರ್‌ ಶರ್ಮಾ ‘ಧೈರ್ಯಶಾಲಿ ಮಹಿಳೆ’ ಎಂದ ಮುಸ್ಲಿಂ ಯುವಕ

Share the Article

ಬಿಜೆಪಿಯ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಅವರನ್ನು ‘ಧೈರ್ಯಶಾಲಿ ಮಹಿಳೆ’ ಎಂದು ಶ್ಲಾಘಿಸಿ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಯುವಕನೋರ್ವ ಪೋಸ್ಟ್ ಮಾಡಿದ್ದಾನೆ.

ಪೋಸ್ಟ್‌ ಮಾಡಿದ 19 ವರ್ಷದ ಈ ವ್ಯಕ್ತಿಯನ್ನು ಈಗ ಬಂಧಿಸಲಾಗಿದೆ. ಈ ವ್ಯಕ್ತಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ನಗರದ ನಿವಾಸಿ. ಅಷ್ಟೇ ಅಲ್ಲದೆ ಪ್ರವಾದಿ ಮಹಮ್ಮದ್‌ ವಿರುದ್ಧ ಆಕ್ಷೇಪಾರ್ಹ ಪೋಸ್ಟ್‌ ಮಾಡಿದ ಆರೋಪವೂ ಈತನ ಮೇಲಿದೆ.

ಆತನ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬೆನ್ನಲ್ಲೇ ಉದ್ರಿಕ್ತ ಗುಂಪು ಯುವಕನ ಮನೆಗೆ ತೆರಳಿ, ಆತನ ಮೇಲೆ ಹಲ್ಲೆ ನಡೆಸಿ ಪ್ರಶ್ನಿಸುತ್ತಿರುವ ವಿಡಿಯೊ ಕೂಡ ವೈರಲ್‌ ಆಗಿದೆ. ಆಗ ಆತನ ಮನೆಯ ಮುಂದೆ ಮುಸ್ಲಿಂ ಸಮುದಾಯದ ನೂರಾರು ಮಂದಿ ಹೋಗಿ ಪ್ರತಿಭಟನೆ ನಡೆಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಯುವಕನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಪ್ರವಾದಿ ಮಹಮ್ಮದ್‌ ಅಪಮಾನ ವಿಚಾರಕ್ಕೆ ಸಂಬಂಧಿಸಿ ನೂಪರ್‌ ಶರ್ಮಾ ಅವರಿಗೆ ಸೋಮವಾರ ಹೇಳಿಕೆ ದಾಖಲಿಸುವಂತೆ ಭಿವಂಡಿ ಪೊಲೀಸರು ಸಮನ್ಸ್‌ ನೀಡಿದ್ದಾರೆ. ನೂಪುರ್ ಶರ್ಮಾ ಅವರು ಸ್ವಲ್ಪ ಕಾಲಾವಕಾಶ ಕೇಳಿದ್ದಾರೆ. ಮತ್ತೊರ್ವ ಪದಚ್ಯುತ ಬಿಜೆಪಿ ಮುಖಂಡ ನವೀನ್‌ ಕುಮಾರ್‌ ಜಿಂದಾಲ್‌ ಅವರಿಗೂ ಜೂನ್‌ 15ರಂದು ತಮ್ಮ ಹೇಳಿಕೆಯನ್ನು ದಾಖಲಿಸುವಂತೆ ಭಿವಂಡಿ ಪೊಲೀಸರು ಸೂಚಿಸಿದ್ದಾರೆ.

Leave A Reply