ಬೂದಿ ಮುಚ್ಚಿದ ಕೆಂಡದಂತಿದೆ ಭಾರತ !! | ಯುಪಿಯಲ್ಲಿ 250ಕ್ಕೂ ಹೆಚ್ಚು ಗಲಭೆಕೋರರನ್ನು ಹೆಡೆಮುರಿಕಟ್ಟಿದ ಖಾಕಿ ಪಡೆ
ಕಳೆದೆರಡು ದಿನಗಳಿಂದ ದೇಶ ಮತ್ತೆ ಕೋಮುಗಲಭೆಗೆ ಸಾಕ್ಷಿಯಾಗುತ್ತಿದೆ. ಪ್ರವಾದಿ ಮುಹಮ್ಮದ್ ಪೈಗಂಬರ್ ಬಗ್ಗೆ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆ ಖಂಡಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಳೆದ ಎರಡು ದಿನಗಳಿಂದ ದೇಶದ ವಿವಿಧೆಡೆ ಹೊತ್ತಿ ಉರಿದಿದ್ದ ಪ್ರದೇಶಗಳಲ್ಲಿ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ.
ರಾಂಚಿಯಲ್ಲಿ ಹಿಂದೂ ಸಂಘಟನೆಗಳು ಕರೆ ನೀಡಿದ್ದ ಬಂದ್ ಶಾಂತಿಯುತವಾಗಿ ಮುಗಿದಿದೆ. ಮುಂಜಾಗ್ರತಾ ಕ್ರಮವಾಗಿ ಸೋರೆನ್ ಸರ್ಕಾರ ರಾಂಚಿಯಲ್ಲಿ ಕರ್ಫ್ಯೂ ವಿಧಿಸಿ, ಇಂಟರ್‌ನೆಟ್ ಸೇವೆ ಬಂದ್ ಮಾಡಿತ್ತು. ಮೊನ್ನೆಯ ಗಲಭೆಯಲ್ಲಿ ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಿದ್ದು, 8 ಮಂದಿ ಐಸಿಯುವಿನಲ್ಲಿದ್ದಾರೆ. ಮೃತರ ಸಂಖ್ಯೆ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಗಲಭೆ ಸಂಬಂಧ ಎರಡು ಎಫ್‍ಐಆರ್ ದಾಖಲಿಸಿರುವ ಪೊಲೀಸರು ಈವರೆಗೂ ಒಬ್ಬರನ್ನೂ ಬಂಧಿಸಿಲ್ಲ. ಆದರೆ ಉತ್ತರ ಪ್ರದೇಶದ ವಿವಿಧೆಡೆ 250ಕ್ಕೂ ಹೆಚ್ಚು ಮಂದಿ ಗಲಭೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶ, ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್ ಸೇರಿ ಹಲವು ರಾಜ್ಯಗಳಲ್ಲಿ ಗಲಭೆಕೋರರ ವಿರುದ್ಧ ಕಠಿಣ ಸೆಕ್ಷನ್‍ಗಳ ಅನ್ವಯ ಕೇಸ್ ದಾಖಲಿಸಲಾಗಿದೆ. ಉತ್ತರ ಪ್ರದೇಶದ ಕಾನ್ಪುರ ಮತ್ತು ಸಹರಾನ್‍ಪುರದಲ್ಲಿ ಬುಲ್ಡೋಜರ್‌ಗೆ ಯೋಗಿ ಸರ್ಕಾರ ಕೆಲಸ ಕೊಟ್ಟಿದೆ. ಶವಿವಾರ ಕೂಡ ಗಲಭೆಗೆ ಸಾಕ್ಷಿಯಾಗಿದ್ದ ಪಶ್ಚಿಮ ಬಂಗಾಳದ ಹೌರಾದಲ್ಲಿ ನಾಳೆಯವರೆಗೂ ಇಂಟರ್‌ನೆಟ್ ಸೇವೆ ಬಂದ್ ಮಾಡಲಾಗಿದೆ. ಜೂನ್ 15 ರವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಿದೆ.