ಮದುವೆಯ ಮರುದಿನವೇ ನಟಿ ನಯನತಾರಾಗೆ ನೋಟಿಸ್ ಶಾಕ್

Share the Article

ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೂನ್‌ 9ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಶುಭಕಾರ್ಯದ ಮರುದಿನ ನಟಿಗೆ ನೋಟಿಸ್ ಬಂದಿದೆ.

ನಟಿ ನಯನತಾರಾಗೆ ತಿರುಮಲ ತಿರುಪತಿ ಟ್ರಸ್ಟ್‌ನಿಂದ ನೋಟೀಸ್‌ ಜಾರಿಯಾಗಿದೆ. ನವ ದಂಪತಿಗಳು ಆಂಧ್ರಪ್ರದೇಶದ ತಿರುಮಲ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ತೆಗೆದ ಕೆಲ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆದರೆ ಈ ಫೋಟೋಗಳೇ ಜೋಡಿಗೆ ಕಂಟಕ ತಂದೊಡ್ಡಿದೆ.

ತಿರುಮಲ ದೇವಸ್ಥಾನದ ಬೀದಿಗಳಲ್ಲಿ ನಯನತಾರಾ ಚಪ್ಪಲಿ ಧರಿಸಿ ತಿರುಗಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುರಾವೆ ಎಂಬಂತೆ ಫೋಟೋಗಳಲ್ಲಿ ಈ ದೃಶ್ಯಗಳು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡ ಟಿಟಿಡಿ ಅಧಿಕಾರಿಗಳು ನೋಟೀಸ್‌ ಜಾರಿ ಮಾಡಿದ್ದಾರೆ.

ದೇವಾಲಯದ ಒಳಗೆ ಪಾದರಕ್ಷೆ ಧರಿಸಿರುವ ನಯನತಾರಾ ದಂಪತಿ ವಿರುದ್ಧ ಭಕ್ತರಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.   ವಿಘ್ನೇಶ್ ಬರಿಗಾಲಿನಲ್ಲಿ ನಡೆಯುತ್ತಿರುವುದು ಕಂಡುಬಂದರೆ, ನಯನತಾರಾ ಚಪ್ಪಲಿ ಧರಿಸಿ ಕಾಣಿಸಿಕೊಂಡಿದ್ದು, ಆ ಪ್ರದೇಶದ ಭಕ್ತರಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು.

ಟಿಟಿಡಿ ನಿಯಮಗಳ ಪ್ರಕಾರ ತಿರುಪತಿ ದೇವಸ್ಥಾನದ ಬೀದಿಗಳಲ್ಲಿ ಚಪ್ಪಲಿ ಧರಿಸಬಾರದು. ಆದರೆ ನಿಯಮ ಉಲ್ಲಂಘಿಸಿ ಜೋಡಿ ಚಪ್ಪಲಿ ಧರಿಸಿ ಬೀದಿಗಳಲ್ಲಿ ತಿರುಗಾಡಿದ್ದಾರೆ. ಹೀಗಾಗಿ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.

ಇನ್ನು ನೋಟೀಸ್‌ ಜಾರಿಯಾಗುತ್ತಿದ್ದಂತೆ ಎಚ್ಚೆತ್ತ ಜೋಡಿ, ಸೋಶಿಯಲ್‌ ಮೀಡಿಯಾದಲ್ಲಿ ಕ್ಷಮಾಪಣೆ ಕೇಳಿದೆ. ತಿರುಪತಿ ತಿರುಮಲದ ಬಗ್ಗೆ ನಮ್ಮಲ್ಲಿ ಅಪಾರ ಭಕ್ತಿ-ನಂಬಿಕೆ ಇದೆ. ಮದುವೆಯ ನಂತರ ತಿಮ್ಮಪ್ಪ ಸ್ವಾಮಿಯ ದರ್ಶನಕ್ಕಾಗಿ ಮಂಟಪದಿಂದ ಇಲ್ಲಿಗೆ ಬಂದಿದ್ದೆವು. ಆದರೆ ದೇವಸ್ಥಾನದ ಹೊರಗೆ ಭಕ್ತಾದಿಗಳು ಹೆಚ್ಚಾಗಿ ನೆರೆದಿದ್ದರಿಂದ ಎರಡನೇ ಬಾರಿಗೆ ಫೋಟೋ ತೆಗೆಯಲು ಬಂದಿದ್ದೆವು. ಈ ವೇಳೆ ಅಚಾತುರ್ಯ ಜರುಗಿದ್ದು, ಈ ತಪ್ಪಿಗಾಗಿ ಕ್ಷಮೆ ಕೇಳುತ್ತೇವೆ” ಎಂದು ಹೇಳಿದ್ದಾರೆ.

Leave A Reply