ಪೊಲೀಸರೇ ಕಟ್ಟೆಚ್ಚರದಿಂದಿರಿ

ಹುಬ್ಬಳ್ಳಿ: ಪ್ರವಾದಿ ಮಹ್ಮದ್ ಅವರ ಬಗ್ಗೆ ನೂಪುರ್ ಶರ್ಮಾ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ವಿರೋಧಿಸಿ ದೇಶದ ಕೆಲವೆಡೆ ಪ್ರತಿಭಟನೆ ನಡೆಯುತ್ತಿದ್ದು, ಮುಂಜಾಗೃತಾ ಕ್ರಮವಾಗಿ ರಾಜ್ಯದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂಬುದಾಗಿ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

 

ನಗರದ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರೊಂದಿಗೆ ಮಾತನಾಡಿ, ನೂಪುರ್ ಶರ್ಮಾ ಅವರ ಹೇಳಿಕೆ ಕುರಿತು ದೇಶದ ವಿವಿಧ ಕಡೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈಗಾಗಲೇ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ತುರ್ತು ಕ್ರಮ ಕೈಗೊಂಡು ಕಟ್ಟೆಚ್ಚರದಿಂದ ಇರಲು ಸೂಚಿಸಲಾಗಿದೆ ಎಂದರು.

ರಾಜ್ಯದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ನಿಯಂತ್ರಣದಲ್ಲಿದೆ. ಆದರೂ ಜಾಗೃತವಾಗಿರಬೇಕೆಂದು ತಿಳಿಸಲಾಗಿದೆ. ಪ್ರತಿಯೊಂದು‌ ಠಾಣೆಯ ಸಿಪಿಐ ಅವರನ್ನು ಉಸ್ತುವಾರಿ ಮಾಡಿ, ಎಲ್ಲ ಸಮುದಾಯದವರ ಜತೆ ಸೌಹಾರ್ದಯುತ ವಾತಾವರಣ ನಿರ್ಮಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಮಹಿಳೆ ಮೇಲೆ ಆ್ಯಸಿಡ್ ದಾಳಿ ನಡೆದಿರುವುದು ದುರದೃಷ್ಟಕರ. ಈ ಕುರಿತು ಕಠಿಣ ಕಾನೂನು ಕ್ರಮ ಕೈಗೊಳ್ಳಲು ಚಿಂತಿಸಲಾಗುತ್ತಿದೆ ಎಂದರು.

ಇನ್ನೂ ರಾಯಚೂರಿನಲ್ಲಿ ಕಲುಷಿತ ನೀರು ಸೇವಿಸಿ ಜನ ಸಾವನ್ನಪ್ಪಿದ ಪ್ರಕರಣದ ಕುರಿತು ಪ್ರತಿಕ್ರಿಯಿಸಿ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಅಮಾನತ್ತು ಮಾಡಲಾಗಿದೆ. ತಪ್ಪತಸ್ಥರ ವಿರುದ್ಧ ಕ್ರಮಿನಲ್ ಮೊಕದ್ದಮೆ ಹೂಡಲಾಗುವುದು ಎಂದರು.

Leave A Reply

Your email address will not be published.