ಮೇ ತಿಂಗಳಲ್ಲಿ ತಿರುಪತಿಗೆ 130 ಕೋಟಿ ಆದಾಯ
ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ಸನ್ನಿಧಿಗೆ ಈ ಹಿಂದೆ ಎಂದೂ ಕಂಡು ಕೇಳರಿಯದ ಆದಾಯ ಹರಿದುಬಂದಿದೆ. ಎರಡು ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ಭಕ್ತರ ಭೇಟಿ ಇಳಿಮುಖವಾಗಿತ್ತು. ಇದೀಗ ಕೋವಿಡ್ ನಿರ್ಬಂಧಗಳಿಲ್ಲದ ಕಾರಣ ತಿರುಮಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಅಧಿಕವಾಗಿದ್ದು, ಆದಾಯ ಕೂಡ ಅಷ್ಟೇ ಏರಿಕೆಯಾಗಿದೆ. ಕೇವಲ ಮೇ ತಿಂಗಳಲ್ಲಿ ಎರಡು ತೆಲುಗು ರಾಜ್ಯಗಳಿಂದ ಮಾತ್ರವಲ್ಲದೆ ದೇಶ ವಿದೇಶಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ತಿರುಮಲಕ್ಕೆ ಭೇಟಿ ನೀಡಿದ್ದಾರೆಂದು ಆಡಳಿತ ಮಂಡಳಿ ತಿಳಿಸಿದೆ.
ಮೇ ತಿಂಗಳಲ್ಲಿ ಸುಮಾರು 22.62 ಲಕ್ಷ ಭಕ್ತರು ಶ್ರೀವಾರಿ ದರ್ಶನ ಪಡೆದಿದ್ದಾರೆ ಎಂದು ಟಿಟಿಡಿ ಇಒ ಧರ್ಮರೆಡ್ಡಿ ತಿಳಿಸಿದ್ದಾರೆ. ಮೇ ತಿಂಗಳ ಸ್ವಾಮಿಯ ಹುಂಡಿ ಆದಾಯ ಬರೋಬ್ಬರಿ 130 ಕೋಟಿ ಎಂದು ಟಿಟಿಡಿ ಆದೇಶ ಪ್ರತಿಯಲ್ಲಿ ಬಹಿರಂಗಪಡಿಸಿದೆ. ಒಂದೇ ತಿಂಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಸ್ವಾಮಿಯ ಹುಂಡಿಗೆ ಆದಾಯ ಹರಿದು ಬಂದಿರುವುದು ಇದೇ ಮೊದಲು ಎಂದಿದ್ದಾರೆ ಧರ್ಮರೆಡ್ಡಿ. ಭಕ್ತರ ಅನುಕೂಲಕ್ಕಾಗಿ ಟೈಂ ಸ್ಲಾಟ್ ಸರ್ವದರ್ಶನ ವ್ಯವಸ್ಥೆಯನ್ನು ಪುನರಾರಂಭಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ತಿರುಪತಿಯಲ್ಲಿ ಟೈಂ ಸ್ಲಾಟ್ ಟೋಕನ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಶೀಘ್ರದಲ್ಲೇ ಇವುಗಳನ್ನು ಭಕ್ತರಿಗೆ ನೀಡಲಾಗುವುದು ಎಂದರು.