ಪುತ್ತೂರು: ಯುವ ಉದ್ಯಮಿ,ಜಯಕರ್ನಾಟಕ ಜನಪರ ವೇದಿಕೆ ಸಂಸ್ಥಾಪಕ ಗುಣರಂಜನ್ ಶೆಟ್ಟಿ ಹತ್ಯೆಗೆ ಸಂಚು!!
ಪುತ್ತೂರು: ಪ್ರತಿಷ್ಠಿತ ಬೆಳ್ಳಿಪ್ಪಾಡಿ ಮನೆತನದವರಾದ ಚಿಕ್ಕಮುನ್ನೂರು ಗ್ರಾಮದ ಉರಮಾಲು ನಿವಾಸಿಯಾಗಿರುವ ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಗುಣರಂಜನ್ ಶೆಟ್ಟಿಯವರನ್ನು ಹತ್ಯೆಗೈಯ್ಯಲು ಸಂಚು ರೂಪಿಸಿರುವ ಆಘಾತಕಾರಿ ಸುದ್ದಿಯೊಂದು ತಿಳಿದು ಬಂದಿದೆ. ಯುವ ಉದ್ಯಮಿ ಗುಣರಂಜನ್ ಶೆಟ್ಟಿಯವರನ್ನು ಕೊಲೆ ಮಾಡಲು ಸಂಚು ರೂಪಿಸಿರುವ ಕುರಿತು ಬೆಂಗಳೂರು ಮತ್ತು ಮಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಎನ್. ಮುತ್ತಪ್ಪ ರೈಯವರ ಆಪ್ತ, ಗುಣರಂಜನ್ ಶೆಟ್ಟಿಯವರನ್ನು ಹತ್ಯೆ ಮಾಡಬೇಕೆಂದು ಪಣ ತೊಟ್ಟಿರುವ ಗ್ಯಾಂಗ್ ಸ್ಟರ್ ಗಳು ಕೊಲೆಗೆ ಸಂಚು ರೂಪಿಸಿರುವುದನ್ನು ಪೊಲೀಸರು ಖಾತರಿ ಪಡಿಸಿದ್ದಾರೆ.
ಖ್ಯಾತ ಬಹುಭಾಷಾ ಚಲನಚಿತ್ರ ನಟಿ ಅನುಷ್ಕಾ ಶೆಟ್ಟಿಯವರ ಸಹೋದರನಾದ ಗುಣರಂಜನ್ ಶೆಟ್ಟಿ ಅವರು ಬೆಂಗಳೂರಿನಲ್ಲಿ ಉದ್ಯಮಿಯಾಗಿ, ಸಮಾಜ ಸೇವಕನಾಗಿ ಗುರುತಿಸಿಕೊಂಡಿದ್ದಾರೆ. ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಗುರುತಿಸಿಕೊಳ್ಳದ ಗುಣರಂಜನ್ ಶೆಟ್ಟಿಯವರನ್ನು ಯಾವ ಕಾರಣಕ್ಕೆ ಟಾರ್ಗೆಟ್ ಮಾಡಲಾಗಿದೆ ಎಂಬ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.
ಪೊಲೀಸರು ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ. ಇದುವರೆಗೆ ಗುಣರಂಜನ್ ಅವರನ್ನು ಹತ್ಯೆ ಮಾಡಲು ಸ್ಕೆಚ್ ಹಾಕಿರುವ ಭೂಗತ ಪಾತಕಿಗಳ ತಂಡದಲ್ಲಿ ಪುತ್ತೂರು ಮೂಲದ ವ್ಯಕ್ತಿಯೋರ್ವರಿದ್ದಾರೆ ಎಂದು ಶಂಕಿಸಿ ಪೊಲೀಸ್ ತನಿಖೆ ನಡೆಸುತ್ತಿದ್ದಾರೆ.
ನನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ..!!
ಗುಣರಂಜನ್ ಶೆಟ್ಟಿ ಹತ್ಯೆಗೆ ಸಂಚು ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿರೋ ಬೆನ್ನಲ್ಲೇ ಮನ್ಮಿತ್ ರೈ ಕೈವಾಡದ ಬಗ್ಗೆ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಮನ್ಮಿತ್ ರೈ ಸ್ಪಷ್ಟನೆ ನೀಡಿದ್ದಾರೆ. ಈ ಪ್ರಕರಣದಲ್ಲಿ ನನ್ನ ಕೈವಾಡವಂತೂ ಇಲ್ಲವೇ ಇಲ್ಲ ಎಂದು ಮನ್ಮಿತ್ ರೈ ಹೇಳಿದ್ದಾರೆ.
ಪೊಲೀಸರು ಈ ಪ್ರಕರಣದಲ್ಲಿ ನನ್ನ ಹೆಸರು ಹೇಳಿರುವುದು ನಿಜ. ಆದರೆ ನಾನು ಈ ಹತ್ಯೆ ಸಂಚಿನಲ್ಲಿ ಇಲ್ಲ. ಗುಣರಂಜನ್ ಶೆಟ್ಟಿ ಹಾಗೂ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ಬಂಟ್ವಾಳದ ಶ್ರೀಕಾಂತ್ ಶೆಟ್ಟಿ ಹತ್ಯೆಯ ಸಂಚಿಗೂ ನನಗೂ ಸಂಬಂಧವಿಲ್ಲ. ಉದ್ಯಮ ಆರಂಭಿಸುವ ಉದ್ದೇಶದಿಂದ ಥೈಲ್ಯಾಂಡಿಗೆ ಬಂದಿದ್ದೇನೆ ಎಂದು ಮುತ್ತಪ್ಪ ರೈ ನಿಕಟ ಸಂಬಂಧಿ ಮನ್ಮಿತ್ ರೈ ಸ್ಪಷ್ಟಪಡಿಸಿದ್ದಾರೆ.