ಕೋಚಿಂಗ್ ಕ್ಲಾಸ್ ಬ್ಯಾನ್ : PU ಬೋರ್ಡ್ ನಿಂದ ಮಹತ್ವದ ನಿರ್ಧಾರ !
ಪಿಯುಸಿಗೆ ಸೇರಿದ ನಂತರ ತರಗತಿಯ ಪಠ್ಯದ ಜೊತೆಗೆ ಕಾಲೇಜಿನಲ್ಲಿ ವೃತ್ತಿಪರ ಕೋರ್ಸ್ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಸೇರೋದು ಎಲ್ಲರಿಗೂ ಗೊತ್ತೇ ಇದೆ. ಆದರೆ ಕೆಲ ಶಿಕ್ಷಣ ಸಂಸ್ಥೆಗಳು ಇದನ್ನೇ ನೆಪ ಮಾಡಿಕೊಂಡು ಹಣ ಸುಲಿಗೆ ಮಾಡೋದರಲ್ಲಿ ಎತ್ತಿದ ಕೈ. ಇದಕ್ಕೆಲ್ಲಾ ಕಡಿವಾಣ ಹಾಕಲು ಪದವಿಪೂರ್ವ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ತಗೊಂಡಿದೆ.
ಪಠ್ಯದ ಜೊತೆ ನೀಟ್, ಜೆಇಇ ಮತ್ತು ಸಿಇಟಿಗೆ ತರಬೇತಿ ನೀಡುವ ಇಂಟೆಗ್ರೇಟೆಡ್ ಕೋಚಿಂಗ್ ವ್ಯವಸ್ಥೆಯನ್ನು ಬಹುತೇಕ ಖಾಸಗಿ ಕಾಲೇಜುಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಕೆಲವು ಕಾಲೇಜುಗಳು ಈ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡಿವೆ. ಇತ್ತೀಚೆಗೆ ಕೆಲವು ಕಾಲೇಜುಗಳಲ್ಲಿ ಯುಪಿಎಸ್‌ಸಿ ಪರೀಕ್ಷೆಗಳಿಗೆ ತರಬೇತಿ ನೀಡುವುದಾಗಿ ವಿದ್ಯಾರ್ಥಿಗಳ ಮನವೊಲಿಸಿ ಹಣ ಕೀಳುತ್ತಾರೆ ಎನ್ನುವ ಆರೋಪ ಕೂಡಾ ಕೇಳಿ ಬಂದಿದೆ.
ಹೀಗಾಗಿ ಕೋಚಿಂಗ್ ಕೋರ್ಸ್ ವಿಷಯಕ್ಕೆ ಸಂಬಂಧಿಸಿದಂತೆ ಪಿಯು ಬೋರ್ಡ್ ಮಹತ್ವದ ಆದೇಶವೊಂದನ್ನ ಹೊರಡಿಸಿದೆ.
ಕೋಚಿಂಗ್ ವ್ಯವಸ್ಥೆ ಪದ್ಧತಿ ಜಾರಿಗೊಳಿಸುವ ಮೂಲಕ ವಿದ್ಯಾರ್ಥಿಗಳಿಂದ ದುಬಾರಿ ಶುಲ್ಕ ಪಡೆಯಲಾಗುತ್ತಿರುವುದರಿಂದ ಇಂಟೆಗ್ರೇಟೆಡ್ ಕೋಚಿಂಗ್‌ಗೆ ಅವಕಾಶ ಇಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿಯಮಾವಳಿಯೊಂದು ಇದೆ. ಆದರೆ, ಈ ನಿಯಮಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಇಂಟೆಗ್ರೇಟೆಡ್ ಕೋಚಿಂಗ್ ಇರುವ ಕಾಲೇಜುಗಳಲ್ಲಿ ವರ್ಷಕ್ಕೆ 1.25 ಲಕ್ಷದಿಂದ 3 ಲಕ್ಷದವರೆಗೆ ವಿದ್ಯಾರ್ಥಿಗಳಿಂದ ವಸೂಲಿ ಮಾಡಲಾಗುತ್ತಿದೆ. ಇದು ವಿವಿಧ ಪರೀಕ್ಷೆಗಳ ಅನುಸಾರ ಪ್ಯಾಕೇಜ್ ರೂಪದಲ್ಲಿ ಶುಲ್ಕ ಪಡೆಯಲಾಗುತ್ತದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.
ಗೈಡ್ ಲೈನ್ಸ್ ನಲ್ಲಿ ಏನೇನಿದೆ..?
- ಪಿಯು ಕಾಲೇಜುಗಳಲ್ಲಿ ಸಿಇಟಿ, ಜೆಇಇ, ನೀಟ್, ಇಂಟೆಗ್ರೇಟೆಡ್ ಕೋರ್ಸ್, ಬ್ರಿಡ್ಜ್ ಕೋರ್ಸ್ ಇತ್ಯಾದಿ ಹೆಸರಿನಲ್ಲಿ ಕಾನೂನು ಬದ್ಧವಾಗಿ ನಿಗದಿಪಡಿಸಿದ ಶುಲ್ಕ ಮಾತ್ರ ಸ್ವೀಕರಿಸಬೇಕು.
- ಇತರೆ ಸಂಘ ಸಂಸ್ಥೆ ಅಥವಾ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸೇರಿ ಬೋಧನೆ ಮಾಡುವುದು ಕಂಡು ಬಂದಲ್ಲಿ ಕಾಲೇಜಿನ ಮಾನ್ಯತೆ ರದ್ದು
- ಈ ಸಂಸ್ಥೆಗಳ ಪ್ರಾಂಶುಪಾಲರ ಮತ್ತು ಆಡಳಿತ ಮಂಡಳಿಯ ಮೇಲೆ ಕಾನೂನು ಕ್ರಮ
– ನಿಗದಿಪಡಿಸಿದ ಪಠ್ಯಕ್ರಮವನ್ನು ಹೊರತುಪಡಿಸಿ ಇತರೆ ಯಾವುದೇ ಪಠ್ಯಕ್ರಮ ಬೋಧಿಸಬಾರದು
ಇದರ ಹೊರತಾಗಿಯೂ ಪಠ್ಯೇತರ ಬೋಧನೆ ಕಂಡು ಬಂದರೆ ಸಂಸ್ಥೆಯ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯ ಮೇಲೆ ಕಾನೂನು ಕ್ರಮ
- ಪರಸ್ಪರ ವಿನಿಯಮದೊಂದಿಗೆ ಆ ಸಂಸ್ಥೆಯ ಹೆಸರನ್ನು ತಮ್ಮ ಕಾಲೇಜಿನ ಜತೆ ಬಳಕೆ ಮಾಡಿ ಯಾವುದೇ ರೀತಿ ಶೈಕ್ಷಣಿಕ ಚಟುವಟಿಕೆ ನಡೆಸುವಂತಿಲ್ಲ –
- ಬೇರೆ ಪಠ್ಯ ವಸ್ತುವನ್ನು ಖರೀದಿಸಲು ವಿದ್ಯಾರ್ಥಿಗಳಿಗೆ ಅಥವಾ ಪೋಷಕರಿಗೆ ಒತ್ತಡ ಹೇರುವಂತಿಲ್ಲ.
ಒಟ್ಟಾರೆ ಲಂಗು ಲಗಾಮಿಲ್ಲದೆ ಕೋಚಿಂಗ್ ಹೆಸರಿನಲ್ಲಿ ದುಡ್ಡು ಮಾಡ್ತಿದ್ದ ಕೆಲ ಖಾಸಗಿ ಪಿಯು ಕಾಲೇಜುಗಳಿಗೆ ಸರ್ಕಾರ ಮೂಗುದಾರ ಹಾಕಲು ನಿರ್ಧರಿಸಿದೆ. ಆದರೆ ನಿಯಮ ಮೀರಿದ ಕಾಲೇಜುಗಳ ವಿರುದ್ಧ ಮುಂದಿನ ದಿನಗಳಲ್ಲಿ ಇಲಾಖೆ ಯಾವ ಕ್ರಮ ಕೈಗೊಳ್ಳುತ್ತೆ ಅಂತ ಕಾದು ನೋಡೇಕಿದೆ.