ಉಪ್ಪಿನಂಗಡಿ: ಪತ್ರಕರ್ತರ ಮೇಲಿನ ಹಲ್ಲೆ ಹಿನ್ನೆಲೆ!! ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಕಡಬ: ಉಪ್ಪಿನಂಗಡಿ ಕಾಲೇಜಿನಲ್ಲಿ ಹಿಜಾಬ್ ಗಾಗಿ ಪಟ್ಟು ಹಿಡಿದ ಆರು ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತುಗೊಳಿಸಿದ ಬೆನ್ನಲ್ಲೇ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ವರದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲಿನ ಹಲ್ಲೆ ಯತ್ನವನ್ನು ಖಂಡಿಸಿ ಆರೋಪಿಗಳ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಡಬ ತಾಲೂಕು ಪತ್ರಕರ್ತರ ಸಂಘ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದೆ.

ಉಪ್ಪಿನಂಗಡಿ ಕಾಲೇಜಿನ ಕೆಲ ವಿದ್ಯಾರ್ಥಿಗಳು ಪ್ರತಿಭಟನಾ ನೆಪದಲ್ಲಿ ಪುಂಡರಂತೆ ಗೂಂಡಾಗಿರಿ ಮೆರೆದಿದ್ದು,ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ನಡೆಸಲಾಗಿದೆ.ಮಾಧ್ಯಮ ಪ್ರತಿನಿಧಿಗಳ ಧ್ವನಿ ಅಡಗಿಸುವ ಹುನ್ನಾರದಿಂದ ಕೋಣೆಯಲ್ಲಿ ಕೂಡಿಹಾಕಿ ಬಲವಂತವಾಗಿ ವೀಡಿಯೋ ಗಳನ್ನು ಡಿಲೀಟ್ ಮಾಡಿಸಿದ ಕೃತ್ಯ ಖಂಡನೀಯ, ಇಂತಹ ಕೃತ್ಯ ಎಸಗಿದವರನ್ನು ಕೂಡಲೇ ಬಂಧಿಸಬೇಕೆಂದು ಕಡಬ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿ, ಹಾಗೂ ಡಿವೈಎಸ್ಪಿ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಂಘದ ಅಧ್ಯಕ್ಷ ನಾಗರಾಜ್ ಎನ್. ಕೆ. ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಡಬ ತಾಲೂಕು ಹಿರಿಯ ಪತ್ರಕರ್ತ ಬಾಲಕೃಷ್ಣ ಕೊಯಿಲ, ವಿಜಯ್ ಕಡಬ, ದಿವಾಕರ್ ಎಂ. ಉಪಸ್ಥಿತರಿದ್ದರು.

Leave A Reply

Your email address will not be published.