ಪ್ರೀತಿ ನಿರಾಕರಿಸಿದ ವಿದ್ಯಾರ್ಥಿನಿಗೆ ಹದಿನಾಲ್ಕು ಬಾರಿ ಚೂರಿಯಿಂದ ಇರಿತ!! ಆಕೆ ಮೃತಪಟ್ಟ ಕೆಲ ಹೊತ್ತಿನಲ್ಲೇ ಆರೋಪಿ ಶವವಾಗಿ ಪತ್ತೆ!

ಪ್ರೀತಿ ನಿರಾಕರಿಸಿದ ಪಿ.ಯು.ಸಿ ವಿದ್ಯಾರ್ಥಿನಿಯೋರ್ವಳನ್ನು ಹದಿನಾಲ್ಕು ಬಾರಿ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ನಡೆಸಿದ ಘಟನೆಯೊಂದು ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದಿದ್ದು,ಘಟನೆ ನಡೆದ ಬಳಿಕ ಬಂಧನದ ಭೀತಿಯಲ್ಲಿದ್ದ ಆರೋಪಿ ರೈಲ್ವೇ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.ಕೃತ್ಯ ಎಸಗಿ ಮೃತಪಟ್ಟವನನ್ನು ಕೇಶವನ್ ಎಂದು ಗುರುತಿಸಲಾಗಿದೆ.

ಘಟನೆ ವಿವರ: ತಿರುಚ್ಚಿಯ ನಿವಾಸಿಯಾದ ವಿದ್ಯಾರ್ಥಿನಿ ತನ್ನ ಸಂಬಂಧಿಯೊಬ್ಬರನ್ನು ಭೇಟಿಯಾಗಲೆಂದು ತೆರಳುತ್ತಿದ್ದ ಸಂದರ್ಭ ಎದುರಾದ ಆರೋಪಿ ಕೇಶವನ್ ತನ್ನನ್ನು ಪ್ರೀತಿಸುವಂತೆ ಪೀಡಿಸಿದ್ದಾನೆ. ಈತನ ಕಿರುಕುಳಕ್ಕೂ ಬಗ್ಗದೇ ಯುವತಿ ಪ್ರೀತಿ ನಿರಾಕರಿಸಿದಾಗ ಕೋಪಗೊಂಡ ಆರೋಪಿ ಆಕೆಯನ್ನು ಹರಿತವಾದ ಚೂರಿಯಿಂದ ಹದಿನಾಲ್ಕು ಬಾರಿ ಇರಿದು ಪರಾರಿಯಾಗಿದ್ದ.
ಅತ್ತ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಕೆಲ ಹೊತ್ತಿನ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಆಕೆ ಕೊನೆಯುಸಿರೆಳೆದಿದ್ದಳು. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ ಬಳಿಕ ಆರೋಪಿಯ ಪತ್ತೆಗೆ ಹಲವು ತಂಡಗಳನ್ನು ರಚಿಸಲಾಗಿತ್ತು.
ಇನ್ನೇನು ಪೊಲೀಸರ ಬಂಧನದ ಭೀತಿಯಲ್ಲಿದ್ದ ಕೇಶವನ್ ರಾತ್ರಿ ವೇಳೆಗಾಗಲೇ ರೈಲ್ವೇ ಹಳಿಯಲ್ಲಿ ಅನಾಥ ಶವವಾಗಿ ಬಿದ್ದಿದ್ದು, ಆತನ ಕೊಲೆಯೋ ಆತ್ಮಹತ್ಯೆಯೋ ಎಂಬ ಬಗ್ಗೆಯೂ ತನಿಖೆ ಆರಂಭವಾಗಿದೆ.