ಬೆಲೆಬಾಳುವ BMW ಕಾರನ್ನು ನೀರಿಗೆ ಹಾಕಿದ ವ್ಯಕ್ತಿ | ಅನಂತರ ಹೇಳಿದಾದರೂ‌ ಏನು ?

ಶ್ರೀರಂಗಪಟ್ಟಣ: ಯಾವುದೇ ಒಬ್ಬ ವ್ಯಕ್ತಿ ತನ್ನ ಯಾವುದೇ ವಾಹನವಾದರೂ ಅದನ್ನು ಅತಿಯಾಗಿ ಇಷ್ಟ ಪಡುತ್ತಿರುತ್ತಾರೆ. ಯಾಕಂದ್ರೆ ಅದನ್ನು ಖರೀದಿಸಲು ಪಟ್ಟ ಕಷ್ಟ ಅವರಿಗೆ ತಿಳಿದಿರುತ್ತದೆ. ಹೀಗಾಗಿ ತನ್ನ ವಾಹನಕ್ಕೆ ಏನಾದರೂ ಸಹಿಸುವುದಿಲ್ಲ. ಇಂತಹುದರಲ್ಲಿ ಇಲ್ಲೊಬ್ಬ ವ್ಯಕ್ತಿ ತನ್ನ ಐಷಾರಾಮಿ ಬಿಎಂಡಬ್ಲ್ಯು ಕಾರನ್ನು ನದಿಯಲ್ಲಿ ಮುಳುಗಿಸಿದ್ದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸುಪ್ರಸಿದ್ಧ ನಿಮಿಷಾಂಬ ದೇಗುಲದ ಬಳಿ ನಡೆದಿದೆ.

 

ಕಾರಿನ ಮಾಲೀಕನನ್ನು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ ನಿವಾಸಿ ರೂಪೇಶ್ ಎಂದು ಗುರುತಿಸಲಾಗಿದೆ.

​ಬುಧವಾರ ರಾತ್ರಿ ಕಾರು ಚಲಾಯಿಸಿಕೊಂಡು ಬಂದ ರೂಪೇಶ್​, ಗಂಜಾಂನ ನಿಮಿಷಾಂಬ-ಕರಿಘಟ್ಟ ಸೇತುವೆ ಕೆಳಭಾಗದ ಕಾವೇರಿ ನದಿಯ ನೀರಲ್ಲಿ ಮುಳುಗಿಸಿದ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಗುರುವಾರ ಬೆಳಗ್ಗೆ ಸ್ಥಳಕ್ಕೆ ಬಂದ ಶ್ರೀರಂಗಪಟ್ಟಣ ಪೊಲೀಸರು ಪರಿಶೀಲಿಸಿದಾಗ ಕಾರು ಇರುವುದು ಗೊತ್ತಾಯಿತು.

ಕಾರಿನ ಮಾಲೀಕ ರೂಪೇಶ್​ನನ್ನು ವಿಚಾರಿಸಿದಾಗ ಬುಧವಾರ ರಾತ್ರಿ ಕಾರಿನಲ್ಲಿ ಬರುವಾಗ ಬೆಂಗಳೂರಿನಿಂದಲೂ ಯಾರೋ ಅಪರಿಚಿತ ದುಷ್ಕರ್ಮಿಗಳು ಹಿಂಬಾಲಿಸಿಕೊಂಡು ಆಗಮಿಸಿ ನನ್ನನ್ನು ಕೊಲ್ಲಲು ಪ್ರಯತ್ನಿಸಿದ್ದರು. ಹೀಗಾಗಿ ಕಾವೇರಿ ನದಿಯೊಳಗೆ ಕಾರು ಚಲಾಯಿಸಿದೆ ಎಂದು ಪೊಲೀಸರ ಬಳಿ ಒಮ್ಮೆ ಹೇಳಿಕೆ ನೀಡಿದ್ದ. ಮತ್ತೊಮ್ಮೆ ಇನ್ನೊಂದು ರೀತಿಯ ಹೇಳಿಕೆ ನೀಡಿದ್ದ.

ಹೀಗಾಗಿ ಗೊಂದಲಕ್ಕೆ ಒಳಗಾದ ಟೌನ್​ ಠಾಣೆ ಪೊಲೀಸರು ರೂಪೇಶ್​ ಅವರ ಸಂಬಂಧಿಗಳನ್ನು ಶ್ರೀರಂಗಪಟ್ಟಣಕ್ಕೆ ಕರೆಸಿ ವಿಚಾರಿಸಿದಾಗ, ಈತನ ತಾಯಿ ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾದರು. ಅಂದಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬುದು ತಿಳಿದುಬಂತು. ತನ್ನ ತಾಯಿಯ ಸಾವನ್ನು ತೀವ್ರವಾಗಿ ಮನಸ್ಸಿಗೆ ಹಚ್ಚಿಕೊಂಡಿದ್ದ ರೂಪೇಶ್, ತನ್ನ ತಾಯಿ ಬಹುವಾಗಿ ಇಷ್ಟಪಡುತ್ತಿದ್ದ ಕಾರನ್ನು ನೀರಿನಲ್ಲಿ ಬಿಟ್ಟು ತಾಯಿಯ ಆತ್ಮಕ್ಕೆ ಶಾಂತಿ ಕೋರಿದ್ದರೆಂದು ತಿಳಿದು ಬಂದಿದೆ.

Leave A Reply

Your email address will not be published.