ತಾಂಡ ಹುಡಗ ಎಸ್ಸೆಸ್ಸೆಲ್ಸಿಯಲ್ಲಿ ಹೊಸಪೇಟೆಗೆ ಫಸ್ಟ್!

ಹೊಸಪೇಟೆ: ತಾಂಡ ಹುಡುಗ ಎಸ್ಸೆಸ್ಸೆಲ್ಸಿಯಲ್ಲಿ ೬೨೫ಕ್ಕೆ ೬೨೪ ಅಂಕಗಳನ್ನು ಪಡೆದು ಹೊಸಪೇಟೆ ತಾಲೂಕಿಗೆ ಮೊದಲ ಸ್ಥಾನ ಪಡೆದಿದ್ದಾನೆ.

ಹೌದು, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಂಡೆ ಬಸಾಪುರ ತಾಂಡಾದ ತರುಣಕುಮಾರ ವಿ. ಹೊಸಪೇಟೆ ತಾಲೂಕಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ೬೨೪ಕ್ಕೆ ೬೨೫ ಅಂಕಗಳನ್ನು ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೊರೋನಾ ಹಿನ್ನೆಲೆಯಲ್ಲಿ ಲಾಕ್ಡೌನ್ನಲ್ಲಿ ಅಪ್ಪ-ಅಮ್ಮನೊಂದಿಗೆ ಬಾಲಕ ತರುಣಕುಮಾರ ಕಬ್ಬು ಕಟಾವು ಮಾಡಲು ಮಂಡ್ಯ, ಮೈಸೂರಿಗೂ ತೆರಳಿದ್ದ. ಕಿತ್ತು ತಿನ್ನುವ ಬಡತನದ ಮಧ್ಯೆ ಬಾಲಕ ತರುಣ ಮಾಡಿರುವ ಸಾಧನೆ ಕಂಡು ಇಡೀ ಬಂಡೆ ಬಸಾಪುರ ತಾಂಡಾದ ಜನರೇ ಉತ್ಸಾಹದಲ್ಲಿ ತೇಲಾಡುತ್ತಿದ್ದಾರೆ.
ಕಬ್ಬು ಕಟಾವ್ಗೆ ತೆರಳಿದ್ದ ಬಾಲಕ:
ಕಬ್ಬು ಕಟಾವು ಮಾಡಲು ಅಪ್ಪ-ಅಮ್ಮ ೨೦೨೦ರ ಲಾಕ್ಡೌನ್ ಮತ್ತು ೨೦೨೧ರ ಲಾಕ್ಡೌನ್ ವೇಳೆ ಮಂಡ್ಯ, ಮೈಸೂರಿಗೆ ಕರೆದುಕೊಂಡು ಹೋಗಿದ್ದರು. ತರುಣಕುಮಾರನ ಅಪ್ಪ ಕುಮಾರ ನಾಯ್ಕ ರೈತರಾಗಿದ್ದಾರೆ. ತಾಯಿ ಸಕ್ಕುಬಾಯಿ ಬಿಸಿಯೂಟ (ಕಳೆದ ಒಂದು ವರ್ಷದಿಂದ) ನೌಕರಳಾಗಿದ್ದಾರೆ. ಈ ದಂಪತಿಗೆ ನಾಲ್ವರು ಪುತ್ರಿಯರು, ಇಬ್ಬರು ಪುತ್ರರು. ಇರುವ ೩ ಎಕರೆ ಮಳೆಯಾಶ್ರಿತ ಜಮೀನು ನಂಬಿಕೊಂಡೇ ಕುಟುಂಬ ನಡೆಯಬೇಕು. ಹಾಗಾಗಿ ಪ್ರತಿ ವರ್ಷ ಕುಟುಂಬ ಸಮೇತ ಕಬ್ಬು ಕಟಾವು ಮಾಡಲು ಮಂಡ್ಯ, ಮೈಸೂರಿಗೆ ತೆರಳುತ್ತಾರೆ.
ಮಂಡ್ಯ, ಮೈಸೂರಿಗೆ ಕಬ್ಬು ಕಟಾವು ಮಾಡಲು ತೆರಳಿದ್ದಾಗ ಅಲ್ಲಿ ಅಪ್ಪ,ಅಮ್ಮ ಪಡುವ ಕಷ್ಟ. ಊಟಕ್ಕಾಗಿ ಪರದಾಟ. ಶ್ರಮದಾಯಕ ಬದುಕನ್ನು ಕಂಡ ಬಾಲಕ ತರುಣಕುಮಾರ ಏನಾದರೂ ಸಾಧನೆ ಮಾಡಲೇಬೇಕೆಂಬ ಛಲದೊಂದಿಗೆ ಓದಿ; ಎಸ್ಸೆಸ್ಸೆಲ್ಸಿಯಲ್ಲಿ ೬೨೪ ಅಂಕಗಳನ್ನು ಗಳಿಸಿ ಎಲ್ಲರ ಹುಬ್ಬೇರುವಂತೇ ಮಾಡಿದ್ದಾನೆ.
ಐಎಎಸ್ ಕನಸು:
ಬಾಲಕ ತರುಣಕುಮಾರಗೆ ಪಿಯುಸಿಯಲ್ಲಿ ಸೈನ್ಸ್ ವಿಭಾಗದಲ್ಲಿ ಓದಿ; ಮುಂದೆ ಐಎಎಸ್ ಪರೀಕ್ಷೆಯಲ್ಲಿ ಪಾಸಾಗಿ ಉತ್ತಮ ಅಧಿಕಾರಿಯಾಗಬೇಕೆಂಬ ಕನಸನ್ನು ಹೊಂದಿದ್ದಾನೆ. ಆತ್ಮವಿಶ್ವಾಸ ಹೊಂದಿರುವ ಬಾಲಕ ತರುಣಕುಮಾರ ಶ್ರಮಪಟ್ಟು ಓದಿದರೆ ಯಾವ ಹುದ್ದೆಯನ್ನು ಗಿಟ್ಟಿಸಿಕೊಳ್ಳಬಹುದು ಎಂಬ ಅಚಲ ನಂಬಿಕೆ ಹೊಂದಿದ್ದಾನೆ. ಇಂಗ್ಲಿಷ್ ಭಾಷೆಯಲ್ಲಿ ೧೦೦ಕ್ಕೆ ೯೯ ಅಂಕಗಳನ್ನು ಗಳಿಸಿರುವ ತರುಣಕುಮಾರ, ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕಗಳನ್ನು ಗಳಿಸಿದ್ದಾನೆ. ಉಳಿದ ವಿಷಯಗಳಾದ ಹಿಂದಿ, ಸಮಾಜ ವಿಜ್ಞಾನ, ವಿಜ್ಞಾನ, ಗಣಿತ ವಿಷಯಗಳಲ್ಲಿ ನೂರಕ್ಕೆ ನೂರರಷ್ಟು ಅಂಕಗಳಿಸಿದ್ದಾನೆ.
ದಿನನಿತ್ಯ ಐದಾರು ತಾಸು ಓದುತ್ತಿದ್ದ ತರುಣಕುಮಾರ, ಅಂದಿನ ಪಾಠವನ್ನು ಅಂದೇ ಓದಿ ಮುಗಿಸುತ್ತಿದ್ದ. ಅಲ್ಲದೇ ಟ್ಯೂಷನ್ಗೂ ಹೋಗದೆ ಈ ಸಾಧನೆ ಮಾಡಿದ್ದಾನೆ. ಬಾಲಕ ತರುಣಕುಮಾರ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕಿ ಅನುಲಾ ದೊಡ್ಡಮನೆ ಅವರು ಖುಷಿಪಟ್ಟಿದ್ದಾರೆ.
ಕೊಟ್..೧
ನಮ್ಮದು ತೀರಾ ಬಡತನದ ಕುಟುಂಬ. ಆದರೂ ಮಗನ ಕನಸನ್ನು ಈಡೇರಿಸುತ್ತೇವೆ. ತರುಣ ಸೈನ್ಸ್, ಮೆಡಿಕಲ್ ಓದಿದರೂ ಎಷ್ಟೇ ಕಷ್ಟವಾದರೂ ಓದಿಸುತ್ತೇವೆ.
-ಕುಮಾರ ನಾಯ್ಕ, ಸಕ್ಕುಬಾಯಿ, ತರುಣಕುಮಾರ ತಂದೆ-ತಾಯಿ.
ಕೊಟ್..೨
ತರುಣ್ಕುಮಾರ ತನ್ನ ಪಾಡಿಗೆ ತಾನು ಓದುತ್ತಿದ್ದ. ಶಾಂತ ಸ್ವಭಾವದ ಹುಡುಗನಾಗಿದ್ದ. ೬೨೫ಕ್ಕೆ ೬೨೪ ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾನೆ.
-ಅನೂಲಾ ದೊಡ್ಡಮನೆ , ಮುಖ್ಯ ಶಿಕ್ಷಕಿ ಮೊರಾರ್ಜಿ ದೇಸಾಯಿ ಶಾಲೆ, ತಿಮ್ಮಲಾಪುರ.