ಮಧ್ಯಾಹ್ನದ ಊಟಕ್ಕೆ ಗೋಮಾಂಸ ಭಕ್ಷ್ಯ ತಂದ ಶಾಲಾ ಮುಖ್ಯೋಪಾಧ್ಯಾಯಿನಿ ಅರೆಸ್ಟ್ !!

Share the Article

ಮಧ್ಯಾಹ್ನದ ಊಟಕ್ಕೆ ಗೋಮಾಂಸ ಭಕ್ಷ್ಯ ತಂದ ಶಾಲೆಯ ಮುಖ್ಯೋಪಾಧ್ಯಾಯಿನಿಯೊಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ ಘಟನೆ ಅಸ್ಸಾಂನ ಗೋಲ್‌ಪಾರಾ ಜಿಲ್ಲೆಯಲ್ಲಿ ನಡೆದಿದೆ.

ಮಾ 11 ರಿಂದ ಮೇ 14ರ ವರೆಗೆ ರಾಜ್ಯಾದ್ಯಂತ ನಡೆದ ಶಾಲಾ ಕಾರ್ಯಕ್ಷಮತೆ ಮೌಲ್ಯಮಾಪನ ‘ಗುಣೋತ್ಸವ 2022’ದ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯಿನಿ ಡಾಲಿಮನ್ ನೆಸ್ಸಾ ಅವರು ಗೋಮಾಂಸದ ಭಕ್ಷ್ಯ ತಂದಿದ್ದಾರೆ ಎಂದು ಆರೋಪಿಸಲಾಗಿದೆ.

ಮುಖ್ಯೋಪಾಧ್ಯಾಯಿನಿ ವಿರುದ್ಧ ದೂರು ದಾಖಲಾದ ಹಿನ್ನೆಲೆಯಲ್ಲಿ ಮೇ 16 ರಂದು ಅವರನ್ನು ಪೊಲೀಸ್ ಠಾಣೆಗೆ ಕರೆತರಲಾಯಿತು. ಅಸ್ಸಾಂನಲ್ಲಿ ಗೋಮಾಂಸ ಸೇವನೆಯು ಕಾನೂನುಬಾಹಿರವಲ್ಲ. ಹಿಂದೂಗಳು, ಜೈನರು ಮತ್ತು ಸಿಖ್ಖರು ಬಹುಸಂಖ್ಯಾತರಾಗಿರುವ ಪ್ರದೇಶಗಳಲ್ಲಿ, ದೇವಾಲಯ ಮತ್ತು ಸತ್ರ (ವೈಷ್ಣವ ಮಠ)ದ ಐದು ಕಿಮೀ ವ್ಯಾಪ್ತಿಯ ಪ್ರದೇಶಗಳಲ್ಲಿ ಗೋಹತ್ಯೆ ಮತ್ತು ಗೋಮಾಂಸ ಮಾರಾಟವನ್ನು ‘ಅಸ್ಸಾಂ ಗೋಸಂರಕ್ಷಣಾ ಕಾಯಿದೆ–2021’ರ ಅಡಿಯಲ್ಲಿ ನಿಷೇಧಿಸಲಾಗಿದೆ. ಜೊತೆಗೆ, ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಮುಖ್ಯೋಪಾಧ್ಯಾಯಿನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮುಖ್ಯೋಪಾಧ್ಯಾಯಿನಿಯು ಮಧ್ಯಾಹ್ನದ ಊಟಕ್ಕೆ ಗೋಮಾಂಸವನ್ನು ತಂದಿದ್ದರು ಎಂದು ಆರೋಪಿಸಿ ಲಖಿಪುರ ಪ್ರದೇಶದ ಹುರ್ಕಾಚುಂಗಿ ಇಂಗ್ಲಿಷ್ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು ದೂರು ನೀಡಿದ್ದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮೃಣಾಲ್ ದೇಕಾ ತಿಳಿಸಿದ್ದಾರೆ. ‘ನಾವು ಮೇ 16ರಂದು ಅವರನ್ನು ಪೊಲೀಸ್ ಠಾಣೆಗೆ ಕರೆತಂದೆವು. ವಿಚಾರಣೆಯ ನಂತರ ಅವರನ್ನು ಬಂಧಿಸಲಾಯಿತು. ನ್ಯಾಯಾಲಯವು ಮರುದಿನ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು’ ಎಂದು ಅವರು ಹೇಳಿದ್ದಾರೆ.

Leave A Reply