LKG, UKG ಗೆ ಮಕ್ಕಳನ್ನು ದಾಖಲಿಸುವ ಮೊದಲು ಶಾಲೆಯಲ್ಲಿ ಈ ಸೌಲಭ್ಯಗಳು ಇವೆಯೇ ಎಂದು ತಿಳಿದುಕೊಳ್ಳಿ !
ಇನ್ನೇನು ಶಾಲೆ ಪ್ರಾರಂಭವಾಗುತ್ತದೆ. ಮೇ, ಜೂನ್ ತಿಂಗಳಲ್ಲಿ ಈ ವಿಷಯದಲ್ಲಿ ಪೋಷಕರು ತುಂಬಾ ಚಿಂತಿತರಾಗಿರುತ್ತಾರೆ. ಸಣ್ಣ ಪುಟ್ಟ ಮಕ್ಕಳಿದ್ದರಂತೂ ಇನ್ನೂ ಹೆಚ್ಚು ಚಿಂತೆ. ಇದೊಂದು ದೊಡ್ಡ ಸವಾಲಿನ ಕೆಲಸ ಅಂತಾನೇ ಹೇಳಬಹುದು. ಅದಕ್ಕಾಗಿ ಸಾಧಾರಣವಾಗಿ, ಪೋಷಕರು ತಾವು ವಾಸಿಸುವ ಸ್ಥಳದ ಹತ್ತಿರ ಸುತ್ತಮುತ್ತ ಕೆಲವೊಂದು ಶಾಲೆಗಳನ್ನು ಆಯ್ಕೆ ಮಾಡಿಕೊಂಡು, ಶಾಲೆಗಳ ಬಗ್ಗೆ ವಿಚಾರಿಸುತ್ತಾರೆ.
ತಮ್ಮ ಮಕ್ಕಳಿಗೆ ಒಳ್ಳೆಯ ಶಾಲೆಗೆ ಸೇರಿಸಿ ಉತ್ತಮ ಶಿಕ್ಷಣ ಕೊಡಿಸಬೇಕೆಂಬುದು ಪ್ರತಿಯೊಬ್ಬ ಪಾಲಕರ ಆಸೆ. ತಮಗಿಷ್ಟವಾದ ಶಾಲೆ ಆಯ್ಕೆ ಮಾಡಿಕೊಂಡರೂ ಅದೇ ಶಾಲೆಯಲ್ಲಿ ಪ್ರವೇಶ ಸಿಗುತ್ತಾ ಎಂಬ ಚಿಂತೆ ಕೂಡ ಕಾಡುತ್ತಿರುತ್ತದೆ. ಆದರೆ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವ ಮುನ್ನ ಈ ಕೆಲವು ಅಂಶಗಳನ್ನು ಗಮನಿಸಿದರೆ ಉತ್ತಮ.
ಎಲ್‌ಕೆಜಿ, ಯುಕೆಜಿಗೆ ಪ್ರವೇಶ ಬಯಸುವುದಾದರೆ ಪಾಲಕರು ಕಡ್ಡಾಯವಾಗಿ ಶಾಲೆ ವಾತಾವರಣ, ಶಾಲೆ ಅವಧಿಯಲ್ಲಿ ಮಕ್ಕಳ ಮೇಲೆ ಶಿಕ್ಷಕರು ನಿಗಾ ವಹಿಸುವರೋ, ಇಲ್ಲವೋ ಎಂಬುದರ ಕುರಿತು ತಿಳಿದುಕೊಳ್ಳುವುದು ಬಹಳ ಮುಖ್ಯ. ಎಲ್‌ಕೆಜಿ ಪ್ರವೇಶವಾದರೆ ಪಾಲಕರು ಕಡ್ಡಾಯವಾಗಿ ಶಾಲೆ ವಾತಾವರಣ ಹೇಗಿದೆ? ಶಿಕ್ಷಕ ವರ್ಗ ಸರಿಯಾಗಿದೆಯೇ?ಮೂಲಸೌಕರ್ಯಗಳು, ಪಠ್ಯೇತರ ಚಟುವಟಿಕೆಗೆ ಇರುವ ಅವಕಾಶಗಳು ಮೊದಲಾದ ಅಂಶಗಳನ್ನು ಗಮನಿಸಬೇಕು.
ಅದಲ್ಲದೆ ಕೆಲವು ಪ್ರಮುಖ ಸುರಕ್ಷತಾ ಕ್ರಮಗಳನ್ನು ಕೂಡ ಗಮನಿಸಬೇಕು. ಶಾಲೆಯ ಸುತ್ತ ಕಾಂಪೌಂಡ್ ಅಥವಾ ಬೇಲಿ ಹಾಕಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಶಾಲೆಯ ಪರಿಸರದಲ್ಲಿ ತೆರೆದ ಬಾವಿ, ಬೋರ್ವೆಲ್ ಗಳು ಅಥವಾ ಸ್ವಿಮ್ಮಿಂಗ್ ಪೂಲ್ ನಂತಹ ಅಪಾಯಕಾರಿ ಸ್ಥಳಗಳಿವೆ ಎಂಬುದನ್ನು ಮೊದಲು ಪರಿಶೀಲಿಸಿಕೊಳ್ಳಬೇಕು. ಅದಲ್ಲದೆ ವಿದ್ಯುತ್ ತಂತಿಗಳು, ಸ್ವಿಚ್ ಬೋರ್ಡ್ ಗಳು, ವಿದ್ಯುತ್ ಚಾಲಿತ ಯಂತ್ರಗಳು ಮಕ್ಕಳಿಗೆ ಕೈಗೆಟುಕುವಂತಹ ಸ್ಥಳದಲ್ಲಿ ಇವೆ ಎಂಬುದರ ಬಗ್ಗೆಯೂ ಗಮನಹರಿಸುವುದು ಒಳ್ಳೆಯದು. ಅದಲ್ಲದೆ ಶಾಲೆಗೆ ಆಗಂತುಕರು ಅಥವಾ ಅನಾಮಿಕ ವ್ಯಕ್ತಿಗಳು ಪ್ರವೇಶಿಸುವಂತಹ ಸಾಧ್ಯತೆಗಳಿವೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳುವುದು ಒಳಿತು.
ಶಾಲೆ ಮಗುವಿನ ಅಧ್ಯಯನ ಕೇಂದ್ರ ಮಾತ್ರವಲ್ಲ. ಆ ಮಗುವಿನ ಸಮಗ್ರ ವ್ಯಕ್ತಿತ್ವ ರೂಪಿಸುವ ಕೇಂದ್ರವಾಗಿರುತ್ತದೆ. ಆದ್ದರಿಂದ ಶಾಲೆಯಲ್ಲಿ ಮಗುವಿಗೆ ದೊರೆಯುವ ಮೂಲಸೌಕರ್ಯಗಳ ಬಗ್ಗೆ ಮೊದಲು ಪಾಲಕರು ತಿಳಿದುಕೊಳ್ಳಬೇಕು. ಮಕ್ಕಳನ್ನು ತಿಂಡಿ, ಊಟ, ಮತ್ತು ಆಟಕ್ಕೆಂದು ಬಿಟ್ಟಾಗ ಆಡಳಿತ ಮಂಡಳಿ ಯಾವ ರೀತಿ ವರ್ತಿಸುತ್ತಾರೆ. ಅವರ ನಡವಳಿಕೆ ಹೇಗಿರುತ್ತದೆ. ಅವರ ಮೇಲೆ ಶಿಕ್ಷಕರ ನಿಯಂತ್ರಣ ಇದೆಯೋ ಇಲ್ಲವೋ ಎಂಬ ಕುರಿತು ಪೂರ್ಣ ಮಾಹಿತಿ ಪಡೆದು ನಂತರ ಪ್ರವೇಶ ದೊರಕಿಸಿಕೊಳ್ಳುವುದು ಉತ್ತಮ.
ಮಕ್ಕಳಲ್ಲಿರುವ ಹಲವು ಪ್ರತಿಭೆಗಳನ್ನು ಗುರುತಿಸುವ ಅಥವಾ ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸಿ ಅವರ ಸಾಧನೆಗೆ ಏಣಿಯಾಗುವ ಅವಕಾಶಗಳು ಶಾಲೆಯಲ್ಲಿವೆಯೇ ಎಂಬುದನ್ನೂ ಪರಿಶೀಲಿಸಿ ಮುಂದಿನ ಹೆಜ್ಜೆ ಇಡುವುದು ಉತ್ತಮ.
ಕೆಲವು ಪೋಷಕರು ಮಕ್ಕಳನ್ನು ಉತ್ತಮ ಶಾಲೆಗೆ ಸೇರಿಸುವ ಭರದಲ್ಲಿ ಶಾಲೆ ಶುಲ್ಕದ ಬಗ್ಗೆ ಚಿಂತಿಸುವುದಿಲ್ಲ. ಹಾಗಾಗಿ ಎಚ್ಚರ ವಹಿಸಿ ಶುಲ್ಕ ಕಟ್ಟಿದರೆ ಉತ್ತಮ. ದೊಡ್ಡ ಶಾಲೆಯಾದರೂ ಅಲ್ಲಿ ಉತ್ತಮ ವಿದ್ಯಾಭ್ಯಾಸ ದೊರೆಯುತ್ತದೆಯೇ ಎಂದು ತಿಳಿದುಕೊಳ್ಳುವುದು ಒಳ್ಳೆಯದು. ಕೆಲವು ಶಾಲೆಗಳಲ್ಲಿ ಅತಿ ಹೆಚ್ಚಿನ ಶುಲ್ಕವಿದ್ದರೆ ಇನ್ನು ಕೆಲ ಶಾಲೆಗಳಲ್ಲಿ ಕಡಿಮೆ ಶುಲ್ಕವಿರುತ್ತದೆ. ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ಪಾಲಕರು ಪ್ರವೇಶ ಪಡೆದರೆ ಉತ್ತಮವಾಗಿರುತ್ತದೆ.
ಪ್ರತಿಯೊಂದು ಶಾಲೆಯು ಮಕ್ಕಳಿಗೆ ಕಲಿಸುವುದಕ್ಕಿಂತ ಕಲಿಯುವುದು ಮುಖ್ಯವಾಗಬೇಕು. ನಿಮ್ಮ ಮಕ್ಕಳಿಗೆ ದೊಡ್ಡ ದೊಡ್ಡ ಶಾಲೆಗೆ ಪ್ರವೇಶ ದೊರಕಿತು ಎಂದು ಸುಮ್ಮನಾಗಬೇಡಿ. ಆ ಶಾಲೆಯ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಗಮನಹರಿಸಿ.
ಉತ್ತಮ ಸಭಾಭವನ, ಸೂಕ್ತ ಮೈದಾನ ಇದೆಯೋ ಇಲ್ಲವೋ ಖಚಿತ ಮಾಡಿಕೊಳ್ಳಿ. ಮೈದಾನವಿದ್ದರೂ ಅದು ಸಮೀಪದಲ್ಲಿದೆಯೇ ಅಥವಾ 2,3 ರಸ್ತೆ ದಾಟಿ ತೆರಳಬೇಕೇ ಎಂಬುದರ ಬಗ್ಗೆ ಮಾಹಿತಿ ತಿಳಿದುಕೊಳ್ಳಿ. ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಲ್ಯಾಬ್, ಗ್ರಂಥಾಲಯ ಮೊದಲಾದವುಗಳು ಇವೆಯೇ ನೋಡಿ. ಪ್ರತಿ ಮಕ್ಕಳಿಗೆ ಈ ಸೌಲಭ್ಯಗಳು ಸಿಗುತ್ತವಾ ಎಂಬುದನ್ನು ಪರಿಶೀಲಿಸಿ ಮಕ್ಕಳನ್ನು ಶಾಲೆಗೆ ದಾಖಲು ಮಾಡುವುದು ಒಳ್ಳೆಯದು.
ಮಗುವಿಗೆ ಕೇವಲ ಶಾಲೆಯ ಶಿಕ್ಷಣ ಸಾಕಾಗದು. ಮನೆಯಲ್ಲೂ ಮಗುವಿನ ಶಿಕ್ಷಣ, ಪಾಠಾಭ್ಯಾಸ ಕುರಿತು ಕಾಳಜಿ ವಹಿಸಲೇಬೇಕು. ಮಗು ನಿತ್ಯ ಅಭ್ಯಾಸ ಮಾಡುತ್ತಿದೆಯೋ ಇಲ್ಲವೋ, ಮನೆಯಲ್ಲಿ ಮಗುವಿನ ಶಿಕ್ಷಣ, ಪಾಠಾಭ್ಯಾಸ ಕುರಿತು ಕಾಳಜಿ ವಹಿಸಿ. ಹಾಗೆನೇ ಮಗುವನ್ನು ಶಾಲೆಗೆ ಸೇರಿಸುವ ಮುನ್ನ ಶಾಲಾ ಆಡಳಿತ ಮಂಡಳಿ ಕುರಿತು ಪೂರ್ಣ ಮಾಹಿತಿ ಪಡೆದುಕೊಳ್ಳಿ.