‘ಜೆಡಿಎಸ್ ಪಕ್ಷ ಅಧಿಕಾರಕ್ಕೆ ತಂದೇ ಕೊನೆ ಉಸಿರು ಬಿಡಬೇಕೆಂದು ಪಣ ತೊಟ್ಟಿದ್ದೇನೆ’-ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ
ಚಿಕ್ಕಮಗಳೂರು: ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತಂದೇ ಕೊನೆ ಉಸಿರು ಬಿಡುವುದು ನನ್ನ ರಾಜಕೀಯ ಹಠ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.
ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,”ನನಗೆ 90 ವರ್ಷ ಆಗಿದೆ ಅಂತ ಯಾರೋ ಹೇಳಿದ್ದಾರೆ. ನನಗೆ ಇನ್ನೂ 90 ವರ್ಷ ಆಗಿಯೇ ಇಲ್ಲ. ಒಂದು ಪ್ರಾದೇಶಿಕ ಪಕ್ಷವನ್ನ ಉಳಿಸಿ, ಅಧಿಕಾರಕ್ಕೆ ತರಬೇಕು. ಅದಕ್ಕಾಗಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತಂದು ನನ್ನ ಕೊನೆ ಉಸಿರು ಬಿಡಬೇಕೆಂದು ಪಣ ತೊಟ್ಟಿದ್ದೇನೆ,” ಎಂದು ತಿಳಿಸಿದರು.
90ರ ಜೀವನದ ಕೊನೆ ಹಂತದಲ್ಲಿ ಇರುವ ದೇವೇಗೌಡರಿಗೆ ಒಂದು ಮತ ಕೊಡೋಣ ಎಂಬ ಉಪಕಾರದ ಭಾವನೆ ಜನರಲ್ಲಿ ಬಂದಲ್ಲಿ 2023ರ ಚುನಾವಣೆಯಲ್ಲಿ ನಮ್ಮ ಸರಕಾರ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಮೇ. 13 ರಂದು ಬೆಂಗಳೂರಿನಲ್ಲಿ ನಡೆಯುವ ಜಲಧಾರೆ ಸಮಾರೋಪದ ಬಳಿಕ ಹೋರಾಟ ಆರಂಭಿಸಲಿದ್ದು,ತಿಂಗಳಿಗೆ 2 ವಿಧಾನಸಭಾ ಕ್ಷೇತ್ರಕ್ಕೆ ಭೇಟಿಯಾಗಿ ಪಕ್ಷ ಕಟ್ಟುತ್ತೇನೆ.ಅಲ್ಲದೆ,’ಇದು ನನ್ನ ಕೊನೆ ಹೋರಾಟ’ ಎಂದು ಮನೆ ಮನೆಗೆ ಹೋಗಿ ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಸೂಕ್ಷ್ಮವಾಗಿ ನಾನು ಗಮನಿಸುತ್ತಿದ್ದೇನೆ. ಒಬ್ಬ ರಾಜಕೀಯ ಮುಖಂಡರಾಗಿ ನಾವು ಎಲ್ಲಿ ದಾರಿ ತಪ್ಪುತ್ತಿದ್ದೇವೆ ಎಂಬ ಆತಂಕ ನನ್ನ ಮನದಲ್ಲಿದೆ.ರಾಷ್ಟ್ರೀಯ ಪಕ್ಷಗಳಿಂದ ಪ್ರಾದೇಶಿಕ ಪಕ್ಷಗಳು ಉಳಿಯಲೇಬೇಕು ಆದ್ದರಿಂದ ನನ್ನ ಪ್ರಾಣ ಇರುವವರೆಗೂ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಉಳಿವಿಗಾಗಿ ಹೋರಾಡಲಿದ್ದೇನೆ. ನನ್ನ ಕೊನೆ ಉಸಿರಿರುವವರೆಗೂ ನನ್ನ ಮನಸ್ಸಲ್ಲಿ ಒಂದೇ ಆಸೆ ಅದು ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನ ಅಧಿಕಾರ ತರುವುದು ಎಂದರು.