ಕೇರಳದ ಪ್ರಖ್ಯಾತ ಯೂಟ್ಯೂಬ್ ಸ್ಟಾರ್ ರಿಫಾ ಮೆಹ್ನು ಸಾವಿನ ಕಾರಣ ಬಯಲು| ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಗಂಡನ ಭಯಾನಕ ಮುಖ

ಕೇರಳದ ಪ್ರಖ್ಯಾತ ಬ್ಲಾಗರ್ ಮತ್ತು ಮಲಯಾಳಂ ಯುಟ್ಯೂಬರ್ ಸ್ಟಾರ್ ರಿಫಾ ಮೆಹ್ನು (21) ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಮೆಹ್ವಾಸ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ದುಬೈನ ಜಫಿಲಿಯಾದಲ್ಲಿರುವ ಫ್ಲ್ಯಾಟ್‌ನಲ್ಲಿ ಮಾರ್ಚ್ 1ರಂದು ಶವವಾಗಿ ಪತ್ತೆಯಾಗಿದ್ದರು. ರಿಫಾ ಕೇರಳದ ಕೊಯಿಕ್ಕೋಡ್ ನಗರದ ಬಲುಸ್ಸೆರಿ ಮೂಲದ ನಿವಾಸಿ, ಪತಿ ಮೆಹ್ವಾಸ್ ಮತ್ತು ಮಗಳ ಜತೆ ದುಬೈನಲ್ಲಿ ನೆಲೆಸಿದ್ದರು. ಈ ಹಿಂದೆಯೇ ಕಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಪ್ರಾಥಮಿಕ ತನಿಖೆಯ ಪ್ರಕಾರ ದೈಹಿಕ ಹಾಗೂ ಮಾನಸಿಕ ಹಿಂಸೆಯೇ ರಿಫಾ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಅಲ್ಲದೆ, ದುಬೈ ಪೊಲೀಸರು ಕೂಡ ಇದೇ ಹೇಳಿಕೆಯನ್ನು ನೀಡಿದ್ದಾರೆ.

ಆರೋಪಿ ಮೆಹ್ವಾಸ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 498-ಎ (ಮಹಿಳೆಯ ಮೇಲೆ ದೌರ್ಜನ್ಯ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಅಡಿಯಲ್ಲಿ ಆರೋಪ ಸಾಬೀತಾದರೆ, ಆರೋಪಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

ಇದರ ನಡುವೆ ಇದೀಗ ರಿಫಾ ಸಂಬಂಧಿಯೊಬ್ಬರು ಕೋಯಿಕ್ಕೋಡ್ ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಎ. ಶ್ರೀನಿವಾಸನ್ ಬಳಿ ದೂರು ದಾಖಲಿಸಿದ್ದಾರೆ. ಎಸ್‌ಪಿಯು ಕೂಡ ಆರೋಪಿ ಮೆಹ್ವಾಸ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಇನ್ನು ರಿಫಾ ಮತ್ತು ಪತಿಯ ನಡುವಿನ ಸಂಬಂಧ ಹದಗೆಟ್ಟಿತ್ತು ಎಂದು ಆಕೆಯ ಆಪ್ತರು ಹೇಳಿದ್ದಾರೆ. ಕುಟುಂಬದ ಆದಾಯ ಖರ್ಚು ಮಾಡುವ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿತ್ತು ಎಂದು ಹೇಳಲಾಗಿದೆ. ರಿಫಾ ಸಾವಿಗೆ ಪ್ರಚೋದನೆ ನೀಡಲಾಗಿದ್ದು, ಪತಿಯನ್ನು ಈ ಕ್ಷಣ ವಿಚಾರಣೆಗೆ ಒಳಪಡಿಸಬೇಕು ಎಂದು ರಿಫಾ
ಆಪ್ತರು ಮತ್ತು ಕುಟುಂಬಸ್ಥರು ಮೊದಲೇ ಒತ್ತಾಯಿಸಿದ್ದರು. ಇದೀಗ ಪ್ರಾಥಮಿಕ ತನಿಖೆಯಲ್ಲಿ ದೌರ್ಜನ್ಯ ಎಸಗಿರುವುದು ಬಯಲಾಗಿದೆ.

ಆಹಾರ ಮತ್ತು ಫ್ಯಾಶನ್ ಬಗ್ಗೆ ರಿಫಾ ವಿಡಿಯೋಗಳನ್ನು ಮಾಡಿ, ಕೇರಳದಲ್ಲಿ ತುಂಬ ಪ್ರಸಿದ್ಧಿಯನ್ನು ಪಡೆದಿದ್ದರು. ಸದಾ ಸಾಮಾಜಿಕ ಜಾಲತಾಣದಲ್ಲಿ ರಿಫಾ ಬಿಜಿಯಾಗಿರುತ್ತಿದ್ದರು. ಸಾವಿಗೂ ಕೆಲವು ಕ್ಷಣಗಳ ಹಿಂದೆಯೂ ಆಕೆ ಜಾಲತಾಣದಲ್ಲಿ ಸಕ್ರಿಯರಾಗಿದ್ದರು. ರಿಫಾ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. ಮೂರು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರು. ದಂಪತಿ ಎರಡು ವರ್ಷದ ಓರ್ವ ಗಂಡು ಮಗನಿದ್ದಾನೆ.

Leave A Reply

Your email address will not be published.