ಬೆಳ್ತಂಗಡಿ: ಗುಪ್ತ ನಿಧಿಗಾಗಿ ನಡೆಯಿತೇ, ವಾಮಾಚಾರ ?! | ನಿಧಿಗಾಗಿ ಕ್ಷುದ್ರ ಪೂಜೆ ನಡೆಸಿ ಗುಂಡಿ ಅಗೆದು ಹುಡುಕಾಟ !!

Share the Article

ಬೆಳ್ತಂಗಡಿ ತಾಲೂಕಿನಲ್ಲಿ ನಿಧಿಗಾಗಿ ನಿಗೂಢ ಕೃತ್ಯವೊಂದು ನಡೆದಿದೆ. ಅಲ್ಲಿ ಯಾರೋ ದುಷ್ಕರ್ಮಿಗಳು ಭೂಮಿಯನ್ನು ಅಗೆದು ನಿಧಿಗಾಗಿ ಹುಡುಕಾಟ ನಡೆಸಿರುವ ಘಟನೆ ವರದಿಯಾಗಿದೆ.

ಬೆಳ್ತಂಗಡಿ ತಾಲೂಕಿನ ಸವಣಾಲು ಕೆರೆಕೋಡಿ ರಾಜೇಶ್ ಎಂಬವರ ಜಾಗದಲ್ಲಿ ಕ್ಷುದ್ರ ದೇವರನ್ನು ಒಲಿಸಿಕೊಳ್ಳುವ ಕಾರ್ಯ ನಡೆದಿದೆ. ಮೊದಲಿಗೆ ಈ ಕೃತ್ಯ ಅಲ್ಲಿನ ಸ್ಥಳೀಯ ವ್ಯಕ್ತಿಯೊಬ್ಬರ ಗಮನಕ್ಕೆ ಬಂದಿತ್ತು. ಅದನ್ನು ಗಮನಿಸಿದ ಆತ ಕೂಡಲೇ ಆ ಜಾಗದ ಮಾಲೀಕರಾದ ರಾಜೇಶ್ ಅವರಿಗೆ ಮಾಹಿತಿ ನೀಡಿದ್ದಾರೆ. ರಾಜೇಶ್ ಅವರು ಅಲ್ಲಿಗೆ ತೆರಳಿ ಪರಿಶೀಲಿಸಿದಾಗ ಆ ಜಾಗದಲ್ಲಿ ಒಂದು ಗುಂಡಿ ತೋಡಿದ್ದು ಗಮನಕ್ಕೆ ಬಂದಿದೆ. ಅಲ್ಲದೆ ಆ ಜಾಗದಲ್ಲಿ ಕೆಲ ಬಾಟಲಿಗಳು, ಕುಂಕುಮ, ತೆಂಗಿನ ಕಾಯಿ ಪತ್ತೆಯಾಗಿದೆ. ಅದಲ್ಲದೆ ಗಿಡವೊಂದರಲ್ಲಿ ಕುಂಕುಮ ಮಿಶ್ರಿತ ಲಿಂಬೆ ಹಣ್ಣನ್ನು ಕೂಡ ಮಂತ್ರಿಸಿ ಕಟ್ಟಿದ ಕುರುಹುಗಳು ಸಿಕ್ಕಿವೆ. ಸುಮಾರು 5 ಅಡಿ ಆಳವಾದ ಗುಂಡಿಯನ್ನು ಅಗೆದು ಅಲ್ಲಿ ಹುಡುಕಾಟ ನಡೆಸಿದ ಕುರುಹುಗಳು ಪತ್ತೆಯಾಗಿದೆ.

ನಿಧಿ ಇದೆ ಎನ್ನುವ ಸಂಶಯದಲ್ಲಿ ಯಾರೋ ಅಪರಿಚಿತರು ಈ ಕೃತ್ಯ ನಡೆಸಿರಬಹುದು ಎಂಬ ಬಲವಾದ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ  ಜಾಗದ ಮಾಲೀಕ ರಾಜೇಶ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave A Reply