Home News ನಾಲ್ಕು ರಾಜ್ಯಗಳಲ್ಲಿ ಕೋಮು ಸಂಘರ್ಷಕ್ಕೆ ತಿರುಗಿದ ರಾಮನವಮಿ ಮೆರವಣಿಗೆ !! | ಓರ್ವ ಸಾವು, ಹತ್ತು...

ನಾಲ್ಕು ರಾಜ್ಯಗಳಲ್ಲಿ ಕೋಮು ಸಂಘರ್ಷಕ್ಕೆ ತಿರುಗಿದ ರಾಮನವಮಿ ಮೆರವಣಿಗೆ !! | ಓರ್ವ ಸಾವು, ಹತ್ತು ಮಂದಿಗೆ ಗಂಭೀರ ಗಾಯ

Hindu neighbor gifts plot of land

Hindu neighbour gifts land to Muslim journalist

ನಾಲ್ಕು ರಾಜ್ಯಗಳಲ್ಲಿ ರಾಮನವಮಿ ಆಚರಣೆಯ ಪ್ರಯುಕ್ತ ನಡೆದ ಮೆರವಣಿಗೆಗಳು ಕೋಮು ಸಂಘರ್ಷಕ್ಕೆ ತಿರುಗಿವೆ. ಗುಜರಾತ್, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ನಡೆಯುತ್ತಿದ್ದ ಮೆರವಣಿಗೆಯು ಹಿಂಸಾಚಾರಕ್ಕೆ ತಿರುಗಿದ್ದು, ಕೋಮು ಸಂಘರ್ಷ ಏರ್ಪಟ್ಟಿದೆ. ಇದೇ ವೇಳೆ 10 ಮಂದಿ ಗಾಯಗೊಂಡಿದ್ದು, ಓರ್ವ ಮೃತಪಟ್ಟಿದ್ದಾನೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಮಧ್ಯಪ್ರದೇಶದ ಖರ್ಗಾನ್‌ನ ಕೆಲವು ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ರಾಮ ನವಮಿ ಮೆರವಣಿಗೆ ಸಂದರ್ಭದಲ್ಲಿ ಹಿಂಸಾಚಾರ ಮತ್ತು ಗಲಭೆ ನಡೆದಿದೆ. ಅನೇಕ ಕಡೆ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಸಂಘರ್ಷ ಭುಗಿಲೇಳುವುದನ್ನು ತಡೆಯಲು ಪೊಲೀಸರು ಬಿಗಿ ಭದ್ರತೆ ನಿಯೋಜಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಧ್ವನಿವರ್ಧಕಗಳಿಂದ ಸಂಗೀತ ಪ್ರಸಾರ ಮಾಡುತ್ತಿದ್ದ ವಿಚಾರವಾಗಿ ನಡೆದ ಜಗಳದ ಬಳಿಕ ತಲಬ್ ಚೌಕ್‌ನಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದೆ. ಈ ವೇಳೆ ಘರ್ಷಣೆ ಶುರುವಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯುಗಳನ್ನು ಸಿಡಿಸಬೇಕಾಯಿತು ಎಂದು ಹೆಚ್ಚುವರಿ ಕಲೆಕ್ಟರ್ ತಿಳಿಸಿದ್ದಾರೆ.

ಗುಜರಾತ್‌ನ ಆನಂದ್ ಜಿಲ್ಲೆಯ ಕಂಭಾಟ್ ಮತ್ತು ಸಬರ್ಕಾಂತಾ ಜಿಲ್ಲೆಯ ಹಿಮ್ಮತ್ ನಗರದಲ್ಲಿ ಸಂಘರ್ಷದ ವೇಳೆ ಕಲ್ಲು ತೂರಾಟ ಹಾಗೂ ಬೆಂಕಿ ಹಚ್ಚಿರುವ ಘಟನೆಗಳು ನಡೆದಿವೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯು ಶೆಲ್ ಪ್ರಯೋಗ ಮಾಡಿದ್ದಾರೆ. ಈ ಜಾಗದಲ್ಲಿ ಸುಮಾರು 65 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ ಎಂದು ಕಂಭಾಟ್ ಪೊಲೀಸ್ ವರಿಷ್ಠಾಧಿಕಾರಿ ಅಜೀತ್ ರಜ್ಯಾನ್ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಹೌರಾದಲ್ಲಿ ಶಿಬ್‌ಪುರ್ ಪ್ರದೇಶದಲ್ಲಿ ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಘರ್ಷಣೆಗಳು ವರದಿಯಾಗಿದ್ದು, ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ರಾಮನವಮಿ ಮೆರವಣಿಗೆ ಮೇಲೆ ಪೊಲೀಸರೇ ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಮೆರವಣಿಗೆಯಲ್ಲಿ ತೆರಳುತ್ತಿದ್ದ ಜನರ ಮೇಲೆ ಪೊಲೀಸ್ ಸಿಬ್ಬಂದಿ ಮನಬಂದಂತೆ ಪ್ರಹಾರ ನಡೆಸಿದ್ದಾರೆ ಎಂದು ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ. ಹೌರಾದ ನಿವಾಸಿಗಳು ಸಾಮಾಜಿಕ ಮಾಧ್ಯಮದಲ್ಲಿ ಏನನ್ನಾದರೂ ಬಿತ್ತರಿಸುವಾಗ ಸಂಯಮ ಕಾಪಾಡಿಕೊಳ್ಳಿ ಹಾಗೂ ಯಾವುದೇ ನಕಲಿ ಸುದ್ದಿಗಳನ್ನು ಹರಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಜಾರ್ಖಂಡ್‌ನ ಲೊಹರ್ದಗಾದಲ್ಲಿ ಕೂಡ ರಾಮನವಮಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಹಾಗೂ ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿವೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಶಾಂತಿ ಕಾಪಾಡಲು ಬೃಹತ್ ಸಂಖ್ಯೆಯಲ್ಲಿ ಪೊಲೀಸರನ್ನು ಜಮಾವಣೆ ಮಾಡಲಾಗಿದೆ.