

ಪುತ್ತೂರು: ಇಲ್ಲಿನ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ,ಬಿಜೆಪಿ ಯುವ ನಾಯಕ ಚಂದ್ರಹಾಸ ಈಶ್ವರಮಂಗಲ ಅವರಿಗೆ ಅನಾಮಧೇಯ ವ್ಯಕ್ತಿಗಳಿಂದ ಬೆದರಿಕೆ ಕರೆ ಬಂದ ಬೆನ್ನಲ್ಲೇ, ಬಡಗನ್ನೂರು ಗ್ರಾಮದ ಬಿಜೆಪಿ ಕಾರ್ಯಕರ್ತರೊಬ್ಬರಿಗೆ ಅನಾಮಧೇಯ ವ್ಯಕ್ತಿಗಳು ಫೋನ್ ಕರೆಯಲ್ಲಿ ಬೆದರಿಕೆ ಹಾಕಿದ ಬಗ್ಗೆ ವರದಿಯಾಗಿದೆ.
ಬಡಗನ್ನೂರು ಗ್ರಾಮದ ಬಿಜೆಪಿ ಕಾರ್ಯಕರ್ತ ಅಬ್ದುಲ್ ರಜಾಕ್ ಎಂಬವರಿಗೆ ಕೆಲ ಕಿಡಿಗೇಡಿಗಳು ಕೊಲೆ ಬೆದರಿಕೆ ಹಾಕಿದ್ದು, ಫೋನ್ ಕರೆಯ ಮೂಲಕ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ, ಕುತ್ತಿ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು ತಾಲೂಕಿನಲ್ಲಿ ಕೆಲ ದಿನಗಳಿಂದ ಕೆಲಸವಿಲ್ಲದ ಕಿಡಿಗೇಡಿಗಳು ಸಮಾಜದ ಸ್ವಾಸ್ತ್ಯ ಕದಡುವ ಪ್ರಯತ್ನ ನಡೆಸುತ್ತಿದ್ದೂ, ಶಾಂತಿ, ಸೌಹಾರ್ದತೆ ನೆಲೆಸಿರುವ ಪುತ್ತೂರಿನಲ್ಲಿ ದೊಂಬಿ ಗಲಭೆಗಳಿಗೆ ಅವಕಾಶಕ್ಕಾಗಿ ಹೊಂಚು ಹಾಕಿರುವಂತೆ ಕಾಣುತ್ತಿದೆ. ಸದಾ ಬಿಜೆಪಿ ಕಾರ್ಯಕರ್ತರನ್ನೇ ಟಾರ್ಗೆಟ್ ಮಾಡಿ ಕೊಲೆ ಬೆದರಿಕೆ ಹಾಕುತ್ತಿರುವ ಗಾಂಗ್ ನ್ನು ಆದಷ್ಟು ಬೇಗ ಪೊಲೀಸರು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ ಎನ್ನುವ ಆಗ್ರಹ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.













