ನಶೆಪ್ರಿಯರಿಗೆ ಬೆಲೆ ಏರಿಕೆಯ ಗುನ್ನಾ

ರಾಜ್ಯದ ಬೆಲೆ ಏರಿಕೆಯ  ಬಿಸಿ ಬಿಯರ್ ಬಾಟಲಿಗಳಿಗೂ ತಗುಲಿದೆ. ನಶೆಪ್ರಿಯರ ಕಿಶೆಗೆ ಕನ್ನ ಬೀಳಲಿದೆ. ದಿನಕ್ಕೆ ಒಂದು ಬಿಯರ್ ಕುಡಿಯದೇ ನಿದ್ದೆ ಬರುವುದಿಲ್ಲ ಎನ್ನುವವರ ನಿದ್ದೆಗೆ ಗುನ್ನಾ ಕೊಡಲು ಬಿಯರ್ ದರ ಹೆಚ್ಚಳವಾಗಿದೆ.

ಬೇಯುವ ಬೇಸಿಗೆಕಾಲದ ಹೇಳಿ ಸಂಜೆಗಳಲ್ಲಿ, ತಣ್ಣಗಿನ ನೊರೆಯಾಡುವ ಬೀರು ಹೀರುತ್ತಾ ಸೆಕೆ ಮರೆಯುವ ಬೀರಬಲ್ಲರಿಗೆ ಮತ್ತೆ ಕಾದಿದೆ ಬೆಲೆ ಏರಿಕೆಯ ಬಿಸಿ. ಅತ್ತ ತಮ್ಮ ಪ್ರೀತಿಯ ಗುಳ್ಳೆ ಭರಿತ ಕೆಂಪು ಪಾನೀಯ ಬಿಡಂಗಿಲ್ಲ, ಇತ್ತ ಏರುತ್ತಿರುವ ಪಾನೀಯ ಕೊಳ್ಳಂಗಿಲ್ಲ. ಇದು ಇವತ್ತಿನ ಪರಿಸ್ತಿತಿ.

ಬಿಯರ್‌ ಉತ್ಪಾದನೆಗೆ ಪ್ರಮುಖವಾಗಿ ಬಳಸುವ ಬಾರ್ಲಿ ರಷ್ಯಾ ಮತ್ತು ಉಕ್ರೇನ್‌ನಿಂದ ಆಮದಾಗುತ್ತಿತ್ತು. ಅಲ್ಲಿ ಯುದ್ಧ ನಡೆಯುತ್ತಿರುವುದರಿಂದ ಅಗತ್ಯಕ್ಕೆ ತಕ್ಕಷ್ಟು ಬಾರ್ಲಿ ಬರ್ತಿಲ್ಲ. ಒಂದಿಷ್ಟು ಪೂರೈಕೆಯಾದರೂ, ಅದಕ್ಕೆ ದುಬಾರಿ ಬೆಲೆ ತೆರಬೇಕಾಗಿದೆ. ಹಾಗಾಗಿ ಜನಪ್ರಿಯ ಬೀರು ಬ್ರಾಂಡು ಗಳಾದ ಕಿಂಗ್‌ ಫಿಷರ್‌, ಬಡ್‌ ವೈಸರ್‌, ಟುಬೊರ್ಗ್‌, ನಾಕ್ ಔಟ್ ಸೇರಿದಂತೆ ಎಲ್ಲಾ ಬಗೆಯ ಬಿಯರ್‌ ದರ ಹೆಚ್ಚಳವಾಗಲಿದೆ. ಇನ್ಮುಂದೆ ಮದ್ಯಪ್ರಿಯರು ಬಿಯರ್ ಕುಡಿಯಲೂ ಹೆಚ್ಚು ಹಣ ಕೊಡಲೇಬೇಕಿದೆ.

ಈಗಾಗಲೇ ಬಹುತೇಕ ಎಲ್ಲ ಬಿಯರ್‌ ಕಂಪನಿಗಳು ಪ್ರತಿ ಬಾಟಲ್‌ಗೆ 5 ರಿಂದ 10 ರೂ. ಏರಿಸುವ ಪ್ರಸ್ತಾಪವನ್ನು ನಿಯಮದಂತೆ ಅಬಕಾರಿ ಇಲಾಖೆಗೆ ಸಲ್ಲಿಸಿ, ಅನುಮತಿ ಪಡೆದುಕೊಂಡಿವೆ. ಬಹುತೇಕ ಏ. 15ರಿಂದ ಎಲ್ಲ ಬ್ರಾಂಡ್‌ ಬಿಯರ್‌ ಮೇಲಿನ ಪರಿಷ್ಕೃತ ದರ ಜಾರಿಗೆ ಬರಲಿದೆ,” ಎಂದು ಮೂಲಗಳು ಖಚಿತಪಡಿಸಿವೆ. ಆ ಮೂಲಕ ಸರ್ಕಾರದ ಮತ್ತು ಬೀರ್ ಕಂಪನಿಗಳ ಬೀರು ತುಂಬಲಿದೆ: ಕಾರಣ, ರೇಟ್ ಹೆಚ್ಚಾದರೂ ಕುಡಿಯುವವರು ಒಮ್ಮೆ ಮಾಡಿದ ಅಭ್ಯಾಸವನ್ನು ಸುಲಭಕ್ಕೆ ಬಿಡಲಾರರು. ಅದು ಗೊತ್ತಿದ್ದೇ ಆಗ್ತಿರೋದು ಮದ್ಯದ ಬೆಲೆಯಲ್ಲಿ ನಿರಂತರ ಹೆಚ್ಚಳ.

Leave A Reply

Your email address will not be published.