ಜಮೀನು ವಿವಾದಕ್ಕೆ ಶಿವ ದೇವರಿಗೆ ನೋಟಿಸ್ ನೀಡಿದ ನ್ಯಾಯಾಲಯ !! | ಆಟೋ ರಿಕ್ಷಾ ಮೂಲಕ ಕೋರ್ಟ್ ತಲುಪಿದ ಶಿವಲಿಂಗ | ಹೀಗಿದೆ ನೋಡಿ ಈ ಇಂಟರೆಸ್ಟಿಂಗ್ ಸ್ಟೋರಿ
ನಮ್ಮ ದೇಶದಲ್ಲಿ ದಿನಕ್ಕೊಂದು ರೀತಿಯ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಹಾಗೆಯೇ ಇಲ್ಲೊಂದು ಕಡೆ ಖಾಸಗಿ ಜಮೀನಿನಲ್ಲಿ ದೇವಸ್ಥಾನ ನಿರ್ಮಾಣ ಸಂಬಂಧಿಸಿದಂತೆ ದೇವರಿಗೇ ನೋಟಿಸ್ ಜಾರಿ ಮಾಡಲಾಗಿದೆ. ಅದಲ್ಲದೆ ದೇವರು ಆಟೋದಲ್ಲಿ ನ್ಯಾಯಾಲಯಕ್ಕೆ ಹಾಜರಾದ ಘಟನೆಯೂ ನಡೆದಿದೆ. ಇದೇನಪ್ಪ ಅಂತೀರಾ… ಇಲ್ಲಿದೆ ನೋಡಿ ಇದರ ಕಂಪ್ಲೀಟ್ ಸ್ಟೋರಿ !!
ಛತ್ತೀಸ್‌ಗಢದ ರಾಯಗಢ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಅಲ್ಲಿನ ತಾಲೂಕು ನ್ಯಾಯಾಲಯ ವತಿಯಿಂದ ಕೆಲ ದಿನಗಳ ಹಿಂದೆ ಶಿವನಿಗೆ ಖಾಸಗಿ ಜಮೀನಿನಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿದೆ. ಇದಕ್ಕೆ ಪ್ರತಿಯಾಗಿ ಶಿವ ಶುಕ್ರವಾರ ನ್ಯಾಯಾಲಯಕ್ಕೆ ಆಟೋದಲ್ಲಿ ತಲುಪಿದ್ದಾನೆ. ಸಮಯಕ್ಕೆ ಸರಿಯಾಗಿ ದೇವರು ತಲುಪಿದರೂ ಕೂಡ ನೋಟಿಸ್ ಜಾರಿಗೊಳಿಸಿದ ನ್ಯಾಯಾಧೀಶ ಮಾತ್ರ ಕಚೇರಿಗೆ ಗೈರು ಹಾಜರಾದ ಕಾರಣ, ಶಿವನಿಗೆ ಇದೀಗ ಮುಂದಿನ ದಿನಾಂಕ ನೀಡಲಾಗಿದೆ.
ರಾಯಗಡ ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶದ ವಾರ್ಡ್ ಸಂಖ್ಯೆ 25 ಕೌಹಕುಂದದಲ್ಲಿ, ಮಹಿಳೆಯೊಬ್ಬರು ಖಾಸಗಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ತೆಗೆದುಹಾಕಲು ಛತ್ತೀಸ್‌ಗಢ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಈ ಹಿನ್ನೆಲೆ ಶಿವ ದೇವಸ್ಥಾನಕ್ಕೆ ನೋಟಿಸ್ ನೀಡಲಾಗಿದೆ. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಯಗಡ ತಹಸಿಲ್ ನ್ಯಾಯಾಲಯಕ್ಕೆ ಸೂಚನೆ ನೀಡಿದೆ. ತಹಸಿಲ್ ಕೋರ್ಟ್ ಸಂಬಂಧಪಟ್ಟವರಿಗೆ ಶೋಕಾಸ್ ನೋಟಿಸ್ ನೀಡಿದ್ದು, ಅದರಲ್ಲಿ ಕೌಹಕುಂದದ ಶಿವಮಂದಿರಕ್ಕೂ ಕೂಡ ನೋಟಿಸ್ ನೀಡಲಾಗಿದೆ.