ಮಕ್ಕಳಿಗೆ ನೀತಿಪಾಠ ಹೇಳಿಕೊಡಬೇಕಾಗಿದ್ದ ಶಿಕ್ಷಕರೇ ಬೀದಿಯಲ್ಲಿ ಬಡಿದಾಡಿಕೊಂಡರು !! | ಮೊಟ್ಟೆ ಹಣಕ್ಕಾಗಿ ಇಬ್ಬರು ಶಿಕ್ಷಕರ ನಡುವೆ ಬೀದಿ ಜಗಳ- ವೀಡಿಯೋ ವೈರಲ್
ನಮ್ಮ ಸಮಾಜದಲ್ಲಿ ಶಿಕ್ಷಕರಿಗೆ ಪೂಜ್ಯ ಸ್ಥಾನವಿದೆ. ಮಕ್ಕಳನ್ನು ಒಳ್ಳೆಯ ದಾರಿಯಲ್ಲಿ ನಡೆಸುವುದು ಶಿಕ್ಷಕರ ಜವಾಬ್ದಾರಿಯಾಗಿರುತ್ತದೆ. ಹೀಗಿರುವಾಗ ಮಕ್ಕಳಿಗೆ ಸರಿ-ತಪ್ಪುಗಳ ಬಗ್ಗೆ ಅರಿವು ಮೂಡಿಸಬೇಕಿರುವ ಶಿಕ್ಷಕರೇ ಮೊಟ್ಟೆ ಹಣಕ್ಕಾಗಿ ಬಡಿದಾಡಿಕೊಂಡಿರುವ ಘಟನೆ ಬೀದರ್ ತಾಲೂಕಿನ ಮರ್ಜಾಪೂರ್ ಗ್ರಾಮದಲ್ಲಿ ನಡೆದಿದೆ.
ಹೌದು. ಮಕ್ಕಳಿಗೆ ಪಾಠ ಕಲಿಸಬೇಕಾದ ಶಿಕ್ಷಕರು ಮೊಟ್ಟೆ ಹಣಕ್ಕಾಗಿ ಬೀದಿ ಜಗಳ ಮಾಡಿಕೊಂಡಿದ್ದಾರೆ. ಮುರ್ಜಾಪೂರ್ ಗ್ರಾಮದ ಶಿಕ್ಷಕ ಶಾಂತಕುಮಾರ್ ಹಾಗೂ ಅದೇ ಶಾಲೆಯ ಮುಖ್ಯ ಶಿಕ್ಷಕ ಮಡಯ್ಯ ಸ್ವಾಮಿ ಇಬ್ಬರೂ ಮೊಟ್ಟೆ ಹಣಕ್ಕಾಗಿ ಬೀದಿ ಕಾಳಗ ನಡೆಸಿದ್ದಾರೆ.
ಮರ್ಜಾಪೂರ್ ಗ್ರಾಮದ ಶಿಕ್ಷಕ ಶಾಂತಕುಮಾರ್ ಶಾಲಾ ಮಕ್ಕಳಿಗಾಗಿ ಮೊಟ್ಟೆ ತಂದಿದ್ದಾರೆ. ನಂತರ ಮೊಟ್ಟೆ ಹಣ ನೀಡುವಂತೆ ಮುಖ್ಯ ಗುರುಗಳ ಬಳಿ ಕೇಳಿದ್ದಾರೆ. ಈ ವೇಳೆ ನಾನು ಮೊಟ್ಟೆ ಮುಟ್ಟೊದಿಲ್ಲ ಎಂದು ಮುಖ್ಯ ಶಿಕ್ಷಕ ಮಡಯ್ಯಸ್ವಾಮಿ ಹೇಳಿದ್ದಾರೆ. ಈ ವಿಚಾರವಾಗಿ ಇಬ್ಬರು ಶಿಕ್ಷಕರ ನಡುವ ವಾಗ್ವಾದ ನಡೆದಿದ್ದು, ಇಬ್ಬರೂ ಬಡಿದಾಡಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಕ್ಕಳಿಗೆ ಶಿಸ್ತಿನ ಪಾಠ ಕಲಿಸಬೇಕಿದ್ದ ಶಿಕ್ಷಕರೇ ಬೀದಿಗಿಳಿದು ಈ ರೀತಿ ಕಚ್ಚಾಡಿಕೊಂಡಿರುವ ದೃಶ್ಯವನ್ನು ಅಲ್ಲಿದ್ದವರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಶಿಕ್ಷಕರಿಬ್ಬರ ಜಗಳವನ್ನು ನೋಡಿ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.