ಹಿಜಾಬ್ ‘ತೀರ್ಪು’ ನೀಡಿದ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ : ಸೋಷಿಯಲ್ ಮೀಡಿಯಾದಲ್ಲಿ ಜೀವ ಬೆದರಿಕೆ ನೀಡಿದ ‘ಜಮಾತ್’
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಹೈಕೋರ್ಟ್ ತೀರ್ಪು ನೀಡಿತ್ತು. ತೀರ್ಪಿನ ಬಳಿಕ ಎಲ್ಲಾ ಗೊಂದಲಗಳಿಗೆ ತೆರೆ ಬೀಳಲಿದೆ
ಎಂದು ನೀರಿಕ್ಷಿಸಲಾಗಿದ್ದ ಹಿಜಾಬ್ ವಿವಾದ ಇನ್ನೂ ತಣ್ಣಗಾಗಿಲ್ಲ. ಬದಲಾಗಿ ಹಿಜಾಬ್ ವಿಚಾರದ ತುರ್ತು ವಿಚಾರಣೆಗೆ ಕೋರಿ ವಿದ್ಯಾರ್ಥಿನಿಯರ ಪರ ವಕೀಲರು ಸುಪ್ರೀಂ ಮೊರೆ ಹೋಗಿದ್ದಾರೆ. ಈ ಮಧ್ಯೆ ಹಿಜಾಬ್ ವಿಚಾರದಲ್ಲಿ ಇತ್ತೀಚೆಗೆ ಮಹತ್ವದ ತೀರ್ಪುನೀಡಿದ್ದ ಕರ್ನಾಟಕದ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ ಒಡ್ಡಲಾಗಿದೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.
ತಮಿಳುನಾಡಿನ ತೌಹೀದ್ ಜಮಾತ್ ನಿಂದ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿರುವ ಆರೋಪವೊಂದು ಕೇಳಿಬಂದಿದೆ. ಇದೀಗ ತೌಹೀದ್ ಜಮಾತ್ ಸಂಘಟನೆಯ ರೆಹಮತುಲ್ಲಾ ವಿರುದ್ಧ ಕ್ರಮ ಕೋರಿ ಸಾರ್ವಜನಿಕರೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ಗಿರೀಶ್ ಭಾರದ್ವಾಜ್ ಎಂಬುವವರು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಿಗೆ ಅರ್ಜಿ ಸಲ್ಲಿಸಿದ್ದು ಈ ಆರೋಪಿತರ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲು ಮನವಿ ಮಾಡಿದ್ದಾರೆ.
ಹೈಕೋರ್ಟ್ ಸಿಜೆ ರಿತುರಾಜ್ ಅವಸ್ತಿ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರ ಪೂರ್ಣ ಪೀಠ ಹಿಜಾಬ್ ಗೆ ಸಂಬಂಧಿಸಿದಂತೆ ಇತ್ತೀಚೆಗೆ ತೀರ್ಪು ನೀಡಿತ್ತು. ಸಮವಸ್ತ್ರ ನಿಗದಿಪಡಿಸುವ ಅಧಿಕಾರ ಶಾಲೆಗಳಿಗಿದೆ. ಹಿಜಾಬ್ ಧಾರಣೆ ಕಡ್ಡಾಯವಲ್ಲ. ಈ ಸಂಬಂಧ ರಾಜ್ಯ ಸರ್ಕಾರದ ಆದೇಶ ಕಾನೂನುಬದ್ಧವಾಗಿದೆ. ಉಡುಪಿ ಕಾಲೇಜಿಗೆ ನಿರ್ದೇಶನ ಹೇರುವ ಅಗತ್ಯವಿಲ್ಲ ಅಂತ ಕೋರ್ಟ್ ತನ್ನತೀರ್ಪಿನಲ್ಲಿ ತಿಳಿಸಿತ್ತು. ಈ ತೀರ್ಪಿನ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ ಬಂದಿದೆ ಎನ್ನಲಾಗಿದೆ.
ಈ ಮಧ್ಯೆ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಹಿಜಾಬ್ ಇಸ್ಲಾಂ ಧರ್ಮದ ಅವಿಭಾಜ್ಯ ಭಾಗವಲ್ಲ ಎಂದು ತೀರ್ಪು ನೀಡಿದೆ. ಈ ತೀರ್ಪು ಪ್ರಶ್ನಿಸಿ ನಿಬಾ ನಾಜ್ ಎಂಬ ವಿದ್ಯಾರ್ಥಿನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ತುರ್ತು ವಿಚಾರಣೆಗೆ ನಿರಾಕರಿಸಿದ್ದು ಹೋಳಿ ರಜೆ ಬಳಿಕ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಹೇಳಿದೆ.
ಈ ಅರ್ಜಿ ಸಲ್ಲಿಕೆ ಬೆನ್ನಲ್ಲೇ, ಹಿಂದೂ ಸೇನಾದ ಅಧ್ಯಕ್ಷ ಸುರ್ಜಿತ್ ಯಾದವ್ ಅವರು ಸುಪ್ರೀಂಕೋರ್ಟ್ನಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿದ್ದಾರೆ. ಉಚ್ಚ ನ್ಯಾಯಾಲಯವು ಯಾವುದೇ ಆದೇಶವನ್ನು ನೀಡುವ ಮೊದಲು ತನ್ನ ಮನವಿಯನ್ನು ಆಲಿಸಬೇಕು ಎಂದು ಮನವಿ ಮಾಡಿದ್ದಾರೆ.